ಬೇಲೂರು ತಾಲೂಕಿನ ಉತ್ತೊಳಲು ಗ್ರಾಮದಲ್ಲಿ ಆಯೋಜಿಸಿದ್ದ ಯಕ್ಷಗಾನ ಮೇಳದ ಸಂದರ್ಭ ಶ್ರೀ ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಅಸರಣ್ಣ ಅವರನ್ನು ಸನ್ಮಾನಿಸಲಾಯಿತು. 
ಹಾಸನ

ವಿಶ್ವ ಶಾಂತಿ ಸಾರುವ ಸನಾತನ ಧರ್ಮ

ಲಲಾಟಾಕ್ಷ ಎಸ್
ಬೇಲೂರು: ದೇಗುಲಗಳ ತವರೂರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಮೇಳ ಬಹಳ ಪ್ರಾಮುಖ್ಯತೆ ಪಡೆದಿದ್ದು ಹಿಂದೂ ಧರ್ಮದವರಿಗೆ ಮನೋರಂಜನೆ ಜತೆಗೆ ಧಾರ್ಮಿಕ ಬೋಧನೆ ನೀಡುತ್ತಿದೆ ಎಂದು ಶ್ರೀ ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಅಸರಣ್ಣ ಹೇಳಿದರು.
ತಾಲೂಕಿನ ಉತ್ತೊಳಲು ಗ್ರಾಮದಲ್ಲಿರುವ ಶ್ರೀ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ತಿ ಸೇವಾ ಸಮಿತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುರ್ಗಾ ಪರಮೇಶ್ವರಿಗೆ ಯಕ್ಷಗಾನ ಸೇವೆಯು ಅಚ್ಚುಮೆಚ್ಚು. ಆರಂಭದಲ್ಲಿದ್ದಂತಹ ಒಂದು ಮೇಳ ಇಂದು ಏಳು ಮೇಳಗಳಾಗಿ ಮಾರ್ಪಟ್ಟಿದೆ. ನಮಗೆ ಕಷ್ಟ ಬಂದಾಗ ಮನಸ್ಸಿನಲ್ಲಿ ನಮಗಿಷ್ಟವಾದ ದೇವರನ್ನು ಕುರಿತು ಪ್ರಾರ್ಥಿಸಿದರೆ ಅರ್ಧ ಭಾರ ಕಡಿಮೆಯಾದಂತೆ ಭಾಸವಾಗುತ್ತದೆ. ನಾವು ದೇವರನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ದೇವರು ಸಹ ನಮ್ಮನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಾನೆ. ವಿಶ್ವ ಶಾಂತಿಯನ್ನು ಸಾರುವ ಸನಾತನ ಧರ್ಮವನ್ನು ಉಳಿಸುವ, ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಶಾಸಕ ಎಚ್.ಕೆ.ಸುರೇಶ್, ಉತ್ತೊಳಲಿನ ಕಾರ್ತಿ ಸೇವಾ ಸಮಿತಿ ಅಧ್ಯಕ್ಷೆ ಇಂದಿರಾ ಶಿವಾನಂದ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್‌ಶೆಟ್ಟಿ, ಮಾಜಿ ಶಾಸಕ ವಿಶ್ವನಾಥ್, ಕಾರ್ತಿ ಸೇವಾ ಸಮಿತಿ ಕಾರ‌್ಯದರ್ಶಿ, ಖಜಾಂಚಿ, ಪದಾಧಿಕಾರಿಗಳು, ಗ್ರಾಮಸ್ಥರಿದ್ದರು.