ಶ್ರೀರಾಮ ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಧರ್ಮನಾಯಕ್, ಎಚ್.ಎನ್. ಜಗದೀಶ್, ಪುನೀತ್ ಕಾಳೇನಹಳ್ಳಿ, ದರ್ಶನ್, ಮಹೇಶ್ ಇತರರಿದ್ದರು.
- ಶ್ರೀರಾಮ ಸೇನೆಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
- ದ್ವೇಷ ಭಾಷಣ ವಿಧೇಯಕ ಅನುಮೋದಿಸದಂತೆ ಒತ್ತಾಯ
ಹಾಸನ: ರಾಜ್ಯ ಸರ್ಕಾರ ಅನುಮೋದನೆ ನೀಡಿರುವ ದ್ವೇಷ ಭಾಷಣ ವಿಧೇಯಕ-2025ಕ್ಕೆ ರಾಜ್ಯದ ಹಲವು ಹಿಂದು ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಜಾಗೃತ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದು, ಈ ಮಸೂದೆ ಹಿಂದು ಧಾರ್ಮಿಕ ಆಚರಣೆ ಮತ್ತು ನಾಯಕತ್ವದ ಧ್ವನಿಯನ್ನು ಕುಂಠಿತಗೊಳಿಸುವ ಅಪಾಯಕಾರಿ ಕಾನೂನಾಗಿದೆ. ಹಾಗಾಗಿ ಮಸೂದೆಯನ್ನು ರಾಜ್ಯಪಾಲರು ಅನುಮೋದಿಸದಂತೆ ಒತ್ತಾಯಿಸಿ ಶ್ರೀರಾಮ ಸೇನೆಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಧರ್ಮನಾಯಕ್, ಈ ಮಸೂದೆ ಮೂಲಕ ಹನುಮ ಜಯಂತಿ, ದತ್ತ ಜಯಂತಿ, ಶೋಭಾಯಾತ್ರೆ, ಹಬ್ಬದ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಉಪನ್ಯಾಸ, ಭಕ್ತಿ ಘೋಷಣೆ, ಸಂಕೀರ್ತನೆಗಳು ಇವೆಲ್ಲವನ್ನೂ ದ್ವೇಷ ಭಾಷಣ ಎಂದು ಕೇಸು ದಾಖಲಿಸುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ ಎಂದರು.
ಈ ಮಸೂದೆ ಸಾಧಾರಣ ಧಾರ್ಮಿಕ ಸಂಭಾಷಣೆಯನ್ನೂ ರಾಜಕೀಯ ದೂರುಗಳಂತೆ ಪರಿವರ್ತಿಸಲು ಅವಕಾಶ ನೀಡುತ್ತದೆ. ಇದು ಮಾತಿನ ಸ್ವಾತಂತ್ರೃ ಮತ್ತು ಧಾರ್ಮಿಕ ಆಚರಣೆ ಸ್ವಾತಂತ್ರೃಗಳಿಗೆ ನೇರ ಧಕ್ಕೆ ನೀಡಬಲ್ಲ ಕಾನೂನು ಎಂದು ಗುರುತಿಸಲಾಗಿದೆ. ಈ ಮಸೂದೆ ನಿಷ್ಪಕ್ಷಪಾತವಲ್ಲ. ಪರಿಣಾಮ ಹಿಂದು ಸಮುದಾಯದ ಮೇಲಷ್ಟೇ ಕಾನೂನಾಗಿದೆ. ಕಾನೂನು ಎಲ್ಲ ಧರ್ಮಗಳಿಗೆ ಸಮಾನವಾಗಿ ಅನ್ವಯವಾಗಬೇಕಾದರೆ ಈ ಮಸೂದೆಯ ವಾಸ್ತವಿಕ ಪರಿಣಾಮ ಮಾತ್ರ ಹಿಂದು ಹಬ್ಬಗಳು ಮತ್ತು ಹಿಂದು ನಾಯಕರ ವಿರುದ್ಧ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರ್ಮಿಕ ನಾಯಕರು, ಮಠಾಧೀಶರು, ಶೋಭಾ ಯಾತ್ರೆಗಳಲ್ಲಿ ಮಾತನಾಡುವ ವಕ್ತಾರರ ಮೇಲೆ ಕಾನೂನು ಕಟ್ಟು ಹಾಕಲು ಆರಂಭವಾಗಬಹುದು. ಕೆಲವು ಸಂಘಟನೆಗಳ ಅಭಿಪ್ರಾಯದಲ್ಲಿ, ವಿರೋಧ ಪಕ್ಷಗಳು, ಸಂಘಟಿತ ಗುಂಪುಗಳು ಮತ್ತು ರಾಜಕೀಯ ಹಿತಾಸಕ್ತಿಗಳು ಸುಳ್ಳು ದೂರುಗಳನ್ನು ಹಾಕುವ ಮೂಲಕ ಹಿಂದು ಸಮುದಾಯದ ಧ್ವನಿ ಮಣಿಸಲು ಈ ಕಾನೂನನ್ನು ಬಳಸುವ ಅಪಾಯವಿದೆ. ಸರ್ಕಾರವು ದ್ವೇಷ ಭಾಷಣ ವಿದೇಯಕ-2025 ಅನುಮೋದಿಸದಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ಎಚ್.ಎನ್.ಜಗದೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಪುನೀತ್ ಕಾಳೇನಹಳ್ಳಿ, ನಗರಾಧ್ಯಕ್ಷ ದರ್ಶನ್, ಪ್ರಧಾನ ಕಾರ್ಯದರ್ಶಿ ಮಹೇಶ್ ಬಾಗಲಕೋಟಿ, ಗೋರಕ್ಷಾ ಪ್ರಮುಖ ವಿನಯ್ ಕೆರೆಹಳ್ಳಿ, ಉಪಾಧ್ಯಕ್ಷ ಪ್ರದೀಪ್ ಇತರರಿದ್ದರು.