ಶ್ರೀ ನಂಜುಂಡೇಶ್ವರ ಸ್ವಾಮಿ, ಶ್ರೀ ಪಾರ್ವತಮ್ಮ ದೇವಿ ಕಲ್ಯಾಣೋತ್ಸವ ನೆರವೇರಿತು.
ಆಲೂರು: ಕಸಬಾ ಹೋಬಳಿ ದೊಡ್ಡಕಣಗಾಲು ಸಮೀಪದ ನಂಜೇದೇವರ ಕಾವಲಿನಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ಮತ್ತು ಪಾರ್ವತಮ್ಮ ದೇವಿ ಗಿರಿಜಾ ಕಲ್ಯಾಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು.
ಸೋಂಪುರ ಗ್ರಾಮ ಸೇರಿದಂತೆ ಸುತ್ತಲಿನ 12 ಹಳ್ಳಿಗಳು ಒಟ್ಟಾಗಿ ಸೇರಿ ವರ್ಷಕ್ಕೊಮ್ಮೆ ನಡೆಸುವ ಜಾತ್ರಾ ಮಹೋತ್ಸವಕ್ಕೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಬೆಳಗ್ಗೆ 4 ಗಂಟೆಯಿಂದ ಹಲಿಗೆದೇವರ ಕುಣಿತ ಹಾಗೂ ವೀರಗಾಸೆ ನೃತ್ಯದ ಮೂಲಕ ಸ್ವಾಮಿಯ ಕಳಸದೊಂದಿಗೆ ಪಾದ ಮಂಟಪ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 8 ಗಂಟೆಗೆ ಕೆಂಡೋತ್ಸವ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿದವು. ನಂತರ ಶ್ರೀಗಳು ಆಶೀರ್ವಚನ ನೀಡಿದರು.
ಶಾಸಕರಾದ ಸಿಮೆಂಟ್ ಮಂಜು, ಸ್ವರೂಪ ಪ್ರಕಾಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮೂರು ದಿನಗಳ ಕಾಲ ದೊಡ್ಡಕಣಗಾಲು ಗ್ರಾಮದ ಯುವ ಬಳಗದವರು ದಾಸೋಹ ವ್ಯವಸ್ಥೆ ಮಾಡಿದ್ದರು.
ದೇವಾಲಯ ಟ್ರಸ್ಟ್ ಅಧ್ಯಕ್ಷ ಹಿರಣ್ಣಯ್ಯ, ನಂಜೇಶ್, ಪರಮೇಶ್, ಮಲ್ಲಿಕಾರ್ಜುನ್, ನಂಜುಂಡಪ್ಪ, ನಟರಾಜ್, ದೊಡ್ಡಕಣಗಾಲು ಗ್ರಾಪಂ ಅಧ್ಯಕ್ಷೆ ಶೋಭಾ ರಾಜೇಶ್, ಹುಣಸುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಾವನೂರು ಮೋಹನ್, ತಾಳೂರು ಗ್ರಾಮ ಪಂಚಾಯಿತಿ ಸದಸ್ಯ ಷಡಕ್ಷರಿ, ತಾಲೂಕು ಬಿಜೆಪಿ ಖಜಾಂಚಿ ಹೇಮಂತ್, ಕಿಂಡಿಪುರದ ಮಂಜೇಗೌಡ, ಹರೀಶ್, ಅಗಲಹಳ್ಳಿ ಯೋಗೇಶ್, ಮಂಜೇಗೌಡ, ಮಲ್ಲೇನಹಳ್ಳಿ ಲೋಕೇಶ್ ಹಾಜರಿದ್ದರು.
ಭಾನುವಾರ ಗಂಗಾ ಪೂಜೆಯೊಂದಿಗೆ ಅಭಿಷೇಕ, ಹಸೆ ಶಾಸ್ತ್ರ ನೆರೆವೇರಿದವವು. ಸೋಮವಾರ ಸೋಂಪುರ ಗ್ರಾಮದಿಂದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವರ ಮತ್ತು ಶ್ರೀ ಪಾರ್ವತಮ್ಮ ದೇವಿಯವರ ಕಳಸ ವೀರಗಾಸೆ, ನಂದಿಧ್ವಜ, ಕೀಲುಕುದುರೆ ಕುಣಿತದೊಂದಿಗೆ ನಂಜುಂಡೇಶ್ವರ ಸ್ವಾಮಿ ಬೆಟ್ಟಕ್ಕೆ ಆಗಮಿಸಿದವು. ರಾತ್ರಿ 11ರಿಂದ ಕಲ್ಯಾಣೋತ್ಸವ ನಡೆಯಿತು.