ಟಿ.ಆರ್.ನಾಗರಾಜ್. 
ಹಾಸನ

ಇಂದಿನಿಂದ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ

ಪ್ರಮುಖ ಮುಖ್ಯಾಂಶಗಳು

  • ಜು.26ರಂದು ಮಹಾ ರಥೋತ್ಸವ
  • ದೇವಾಲಯ ಅಭಿವೃದ್ಧಿ ಸಮಿತಿ ಸಂಚಾಲಕ ಟಿ.ಆರ್.ನಾಗರಾಜ್ ಮಾಹಿತಿ
ಅರಸೀಕೆರೆ ಗ್ರಾಮಾಂತರ: ರಾಜ್ಯದ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ತಾಲೂಕಿನ ಸುಕ್ಷೇತ್ರ ಮಾಲೆಕಲ್ಲು ಅಮರಗಿರಿ ತಿರುಪತಿಯಲ್ಲಿ ನೆಲೆಸಿರುವ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಜಾತ್ರಾ ಮಹೋತ್ಸವ ದೇವಾಲಯದ ಸಂಪ್ರದಾಯದಂತೆ ನಡೆಯಲಿದ್ದು, ಈಗಾಗಲೇ ಮುಜರಾಯಿ ಇಲಾಖೆ ಮತ್ತು ದೇವಾಲಯ ಅಭಿವೃದ್ಧಿ ಸಮಿತಿ ಸಕಲ ಸಿದ್ಧತೆಯಲ್ಲಿ ತೊಡಗಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಸಂಚಾಲಕ ಟಿ.ಆರ್.ನಾಗರಾಜ್ ತಿಳಿಸಿದರು.
ಜು.19ರಿಂದ ಆಗಸ್ಟ್ ನಾಲ್ಕರವರೆಗೆ ವೆಂಕಟರಮಣ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಪ್ರತಿದಿನ ವಿಶೇಷ ಪೂಜೆ, ದೇವಾಲಯದ ಆವರಣದಲ್ಲಿ ಉತ್ಸವಗಳು ಜರುಗಲಿದೆ ಎಂದು ತಿಳಿಸಿದರು.
ಶ್ರೀದೇವಿ ಭೂದೇವಿ ಸಮೇತನಾದ ವೆಂಕಟರಮಣಸ್ವಾಮಿಯ ಮಹಾ ರಥೋತ್ಸವ ಜು.26ರಂದು ಮಧ್ಯಾಹ್ನ ಜರುಗಲಿದ್ದು, ನಾಡಿನಾದ್ಯಂತ ಇರುವ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ರಕ್ಷಣೆ ನೀಡುವಂತೆ ಹಾಗೂ ನಗರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಮಾಲೆಕಲ್ಲು ತಿರುಪತಿ ಗ್ರಾಮಕ್ಕೆ ಭಕ್ತರು ಬಂದು ಹೋಗಲು ಸಾರಿಗೆ ಇಲಾಖೆ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯ ನಿಖಿಲ್ ಯೋಗನಾಥನ್, ಪಾರುಪತ್ತೆದಾರ್ ಲೋಕೇಶಯ್ಯ ಮತ್ತಿತರರು ಹಾಜರಿದ್ದರು.