ಅರಸೀಕೆರೆ ತಾಲೂಕಿನ ಪುರಾಣ ಪ್ರಸಿದ್ಧ ಗುತ್ತಿನಕೆರೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ತಿರು ಕಲ್ಯಾಣೋತ್ಸವ ಧಾರ್ಮಿಕ ಪೂಜಾ ಸಮಾರಂಭವನ್ನು ಕೆಂಗೇರಿ ಶ್ರೀರಾಮಾನುಜ ಮಠದ ರಾಮಚಂದ್ರ ಭಟ್ಟಾಚಾರ್ಯ ನೇತೃತ್ವದಲ್ಲಿ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿಯ ಪುರಾಣ ಪ್ರಸಿದ್ಧ ಗುತ್ತಿನಕೆರೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ತಿರು ಕಲ್ಯಾಣೋತ್ಸವ ಧಾರ್ಮಿಕ ಸಮಾರಂಭವನ್ನು ಅತ್ಯಂತ ಸಂಭ್ರಮದಿಂದ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿಪ್ರವೃಂದದವರು ಗುರುವಾರ ನೆರವೇರಿಸಿದರು.
ತಾಲೂಕಿನ ಹಾರನಹಳ್ಳಿ ಸಮೀಪದ ಗುತ್ತಿನಕೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಮಕರ ಸಂಕ್ರಾಂತಿ ಹಬ್ಬದಿಂದ ಪ್ರಾರಂಭವಾಗಿದ್ದು, ಸಂಪ್ರದಾಯದಂತೆ ಬೆಳಗ್ಗೆ ಅಂಕುರಾರ್ಪಣೆ ಹಾಗೂ ಸಂಜೆ ಧ್ವಜಾರೋಹಣ ಪೂಜೆ ಕಾರ್ಯಕ್ರಮಗಳು ನೆರವೇರಿದವು. ನಂತರ ಗ್ರಾಮದ ಮಧ್ಯದಲ್ಲಿ ನೆಲೆಸಿರುವ ಶ್ರೀರಂಗನಾಥಸ್ವಾಮಿ ಮತ್ತು ಶ್ರೀದೇವಿ ಹಾಗೂ ಭೂದೇವಿ ಅಮ್ಮನವರನ್ನು ಸುಮಂಗಲೆಯರು ಮಂಗಳವಾದ್ಯಗಳೊಂದಿಗೆ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮೆರವಣಿಗೆ ಮೂಲಕ ವಧು, ವರರನ್ನು ಕಲ್ಯಾಣ ಮಂಟಪದ ವೇದಿಕೆಗೆ ಕರೆತರಲಾಯಿತು. ಬೆಂಗಳೂರಿನ ಕೆಂಗೇರಿ ಶ್ರೀರಾಮಾನುಜ ಮಠದ ವಿಪ್ರವಂದದ ಪೌರೋಹಿತ್ಯದಲ್ಲಿ ವರ ಅನ್ವೇಷಣೆ, ವರ ಪರೀಕ್ಷೆ, ವರ ಪೂಜೆ, ವರೋಪಚಾರ, ಕಂಕಣ ಧಾರಣೆ, ಕನ್ಯಾದಾನ ಮಾಂಗಲ್ಯಧಾರಣೆ ನಂತರ ಲಾಜಾ ಹೋಮ ಹವನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಕೆಂಗೇರಿ ಶ್ರೀರಾಮಾನುಜ ಮಠದ ರಾಮಚಂದ್ರ ಭಟ್ಟಾಚಾರ್ಯ ಮಾತನಾಡಿ, ವಿಶ್ವದೆಲ್ಲೆಡೆ ಸೃಷ್ಟಿಯಾಗುತ್ತಿರುವ ಪ್ರಾಕೃತಿಕ ವಿಕೋಪಗಳು, ಯುದ್ಧಗಳು, ಅನಿರೀಕ್ಷಿತ ಅವಘಡಗಳು ದೂರವಾಗಿ ವಿಶ್ವದೆಲ್ಲೆಡೆ ಸುಖ, ಶಾಂತಿ ನೆಮ್ಮದಿಯನ್ನು ಭಗವಂತ ಕರುಣಿಸುವ ಮೂಲಕ ಲೋಕಕಲ್ಯಾಣ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘಟಕರಾದ ಮೋಹನ್ ಕುಮಾರ್, ಪೌರೋಹಿತರಾದ ರಾಖೇಶ್ ಹರೇ ಶ್ರೀನಿವಾಸ್ ಭಜನಾ ಮಂಡಳಿ ಮಹಿಳೆಯರು, ನಗರಸಭೆ ಉಪಾಧ್ಯಕ್ಷ ಪಾರ್ಥಸಾರಥಿ, ಶಿರಸ್ತೇದಾರ್ ಶಿವಶಂಕರ್, ಉದ್ಯಮಿ ಶ್ರೀಧರ್‌ಮೂರ್ತಿ ಸೇರಿದಂತೆ ಸಹಸ್ರಾರು ಭಕ್ತಾದಿಗಳು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.