ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವರ ಆಭರಣಗಳನ್ನು ಅಡ್ಡಪಲ್ಲಕ್ಕಿಯಲ್ಲಿ ದೇಗುಲಕ್ಕೆ ಕೊಂಡೊಯ್ದು, ನಂತರ ದೇಗುಲದಲ್ಲಿ ಪರಿಶೀಲಿಸಲಾಯಿತು. ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಇಒ ಯೋಗೀಶ್ ಇತರರಿದ್ದರು.
ಬೇಲೂರು: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಶ್ರೀ ಚನ್ನಕೇಶವಸ್ವಾಮಿ, ಸೌಮ್ಯಾ ನಾಯಕಿ-ರಂಗನಾಯಕಿ ಅಮ್ಮನವರಿಗೆ ಧರಿಸುವ ಚಿನ್ನದ ಆಭರಣಗಳನ್ನು, ತಾಲೂಕು ಕಚೇರಿ ಖಜಾನೆಯಿಂದ ಪೊಲೀಸ್ ಬಂದೋ ಬಸ್ತ್‌ನಲ್ಲಿ ಅಡ್ಡೆಗಾರರು ಹಾಗೂ ಭಕ್ತರ ಸಮ್ಮುಖದಲ್ಲಿ ಬುಧವಾರ ಅಡ್ಡ ಪಲ್ಲಕ್ಕಿ ಮೆರವಣಿಗೆಯಲ್ಲಿ ದೇಗುಲಕ್ಕೆ ತರಲಾಯಿತು.
ಶ್ರೀ ಚನ್ನಕೇಶವಸ್ವಾಮಿ ಹಾಗೂ ಸೌಮ್ಯಾ ನಾಯಕಿ-ರಂಗನಾಯಕಿ ಅಮ್ಮನವರ ಆಭರಣಗಳಿದ್ದ ಪೆಟ್ಟಿಗೆಗೆ ತಾಲೂಕು ಕಚೇರಿ ಖಜಾನೆಯಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಪೂಜೆ ಸಲ್ಲಿಸಿ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಅಡ್ಡ ಪಲ್ಲಕ್ಕಿಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಆವರಣದಿಂದ ಮೆರವಣಿಗೆಯಲ್ಲಿ ತರಲಾಯಿತು. ನಂತರ ದೇಗುಲದ ಇಒ ಯೋಗೀಶ್ ನೇತೃತ್ವದಲ್ಲಿ, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಸಮ್ಮುಖದಲ್ಲಿ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ಟರ್, ನರಸಿಂಹಪ್ರಿಯ ಭಟ್ಟರ್ ಚಿನ್ನದ ಆಭರಣಗಳನ್ನು ಕಚೇರಿಯಲ್ಲಿ ಪರಿಶೀಲಿಸಿದ ನಂತರ ದೇಗುಲದಲ್ಲಿ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸುಪರ್ದಿಗೆ ಭಕ್ತರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಮೈಸೂರು ಮಹಾರಾಜರು ಸೇರಿದಂತೆ, ಅನೇಕ ಭಕ್ತರು ವಿವಿಧ ಸಂದರ್ಭ ದೇವರಿಗೆ ಬಂಗಾರದ ಆಭರಣಗಳನ್ನು ದೇಣಿಗೆಯಾಗಿ ನೀಡಿದ್ದು, ಅವುಗಳನ್ನು ಉತ್ಸವ ಮೂರ್ತಿ ಹಾಗೂ ಮೂಲ ಮೂರ್ತಿಗೆ ಯುಗಾದಿ ಹಬ್ಬದಂದು ಅಲಂಕರಿಸಲಾಗುತ್ತದೆ. ಇದು ಜಾತ್ರಾ ಮಹೋತ್ಸವ ಮುಗಿಯುವವರೆಗೂ ದೇವರ ಮೂರ್ತಿಯ ಮೇಲೆಯೇ ಇರುತ್ತದೆ. ಅಲ್ಲದೆ ಮಾ.23ರಿಂದ ಏಪ್ರಿಲ್ 5ರವರೆಗೆ ವಿವಿಧ ಉತ್ಸವಗಳು ನಡೆಯಲಿದೆ. 31ರಂದು ಬ್ರಹ್ಮರಥೋತ್ಸವ, ಏಪ್ರಿಲ್ 1ರಂದು ನಾಡ ರಥೋತ್ಸವ ಜರುಗಲಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಮಾತನಾಡಿ, ಈ ಬಾರಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಇಲಾಖೆಯಿಂದ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ದೇಗುಲದ ಇಒ ಯೋಗೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟರ್, ನರಸಿಂಹ ಪ್ರಿಯ ಭಟ್ಟರ್, ಅಡ್ಡೆಗಾರರಾದ ಶೈಲೇಶ್, ಪ್ರಮೋದ್, ವೆಂಕಟೇಶ್, ಗಜೇಂದ್ರ ಇತರರಿದ್ದರು.