ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ದೇವರನ್ನು ಪ್ರತಿಷ್ಠಾಪಿಸಿ ಅನಂತ ಪೀಠಾರೋಹಣೋತ್ಸವ ನೆರವೇರಿಸಲಾಯಿತು.
ಬೇಲೂರು: ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವದ ಅಂಗವಾಗಿ ನಾಲ್ಕನೇ ದಿನದಲ್ಲಿ ನಡೆದ ಅನಂತ ಪೀಠಾರೋಹಣೋತ್ಸವ(ಶೇಷವಾಹನ ಉತ್ಸವ)ವು ಅತ್ಯಂತ ವಿಜೃಂಭಣೆಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ರಾತ್ರಿ ನೆರವೇರಿತು.
ಅನಂತ ಪೀಠಾರೋಹಣೋತ್ಸವ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಂದರ್ಭ ಭಕ್ತರು ದೇವರ ದರ್ಶನ ಪಡೆದರು. ಉತ್ಸವ ಮೂರ್ತಿಯನ್ನು ಅಡ್ಡೆಯ ಅನಂತ ಪೀಠಾರೋಹಣೋತ್ಸವದಲ್ಲಿ ಪ್ರತಿಷ್ಟಾಪಿಸಿ ದೇಗುಲದ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು.
ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಅನಂತ ಪೀಠಾರೋಹಣೋತ್ಸವಕ್ಕೆ ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಮಂಗಳವಾದ್ಯಗಳೊಂದಿಗೆ ದೇವಾಲಯದ ಅಷ್ಟ ಬೀದಿಗಳಲ್ಲಿ ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಯಿತು. ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟರ್, ನರಸಿಂಹ ಪ್ರಿಯ ಭಟ್ಟರ್, ಇಒ ಯೋಗೇಶ್ ಸೇರಿದಂತೆ ನೂರಾರು ಭಕ್ತರು, ಅಡ್ಡೆಗಾರರು ಪಾಲ್ಗೊಂಡಿದ್ದರು.