ಬೇಲೂರು ಪಟ್ಟಣದ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ಶ್ರೀ ಚನ್ನಕೇಶವಸ್ವಾಮಿ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು.  
ಹಾಸನ

ಶ್ರೀ ಚನ್ನಕೇಶವಸ್ವಾಮಿ ತೆಪ್ಪೋತ್ಸವ ಅದ್ಧೂರಿ

ಪ್ರಮುಖ ಮುಖ್ಯಾಂಶಗಳು

  • ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ಪ್ರದಕ್ಷಿಣೆ
ಬೇಲೂರು: ಶ್ರೀ ಚನ್ನಕೇಶವಸ್ವಾಮಿ ದಿವ್ಯ ಬ್ರಹ್ಮರಥೋತ್ಸವ ಹಾಗೂ ನಾಡ ರಥೋತ್ಸವ ನೆರವೇರಿದ ಮಾರನೇ ದಿನವಾದ ಗುರುವಾರ ರಾತ್ರಿ ಪಟ್ಟಣದ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ತೆಪ್ಪೋತ್ಸವವು ಅದ್ಧೂರಿಯಾಗಿ ನೆರವೇರಿತು.
ಪಟ್ಟಣ ಸಮೀಪದ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ವಿವಿಧ ಪುಷ್ಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ತೆಪ್ಪದಲ್ಲಿ ನಿರ್ಮಿಸಿದ್ದ ಮಂಟಪದಲ್ಲಿ ಶ್ರೀ ಚನ್ನಕೇಶವಸ್ವಾಮಿಯ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಂಚಾಮೃತ ಅಭಿಷೇಕ, ತೀರ್ಥಸ್ನಾನ, ಶೇಷತೀರ್ಥ ಪ್ರೋಕ್ಷಣೆ ನಡೆಸಿ ಪೂಜೆ ಸಲ್ಲಿಸಲಾಯಿತು.
ನಂತರ ಕಲ್ಯಾಣಿಯ ಗೋಪುರ ಸುತ್ತ ದೇವರಿದ್ದ ತೆಪ್ಪವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ ಉತ್ಸವ ಮೂರ್ತಿಯನ್ನು ಕಲ್ಯಾಣಿ ಮಧ್ಯದಲ್ಲಿರುವ ಕಲ್ಲಿನ ಮಂಟಪದಲ್ಲಿ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಗೋವಿಂದಾ ಗೋವಿಂದಾ ಎಂದು ನಾಮ ಸ್ಮರಣೆ ಮಾಡುತ್ತ ಭಕ್ತಿಯಿಂದ ಕೈಮುಗಿದು ದೇವರ ಕೃಪೆಗೆ ಪಾತ್ರರಾದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಈ ಬಾರಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆದಿದ್ದು, ಅದೇ ರೀತಿ ತೆಪ್ಪೋತ್ಸವ ಸಹ ಅಮೋಘವಾಗಿ ನೆರವೇರಿದೆ. ಶ್ರೀ ಚನ್ನಕೇಶವಸ್ವಾಮಿ ನಾಡಿನ ಹಾಗೂ ಕ್ಷೇತ್ರದ ಜನತೆಗೆ ಉತ್ತಮ ಮಳೆ, ಬೆಳೆಯನ್ನು ಕೊಟ್ಟು ಒಳಿತು ಮಾಡಲಿ ಎಂದು ಆಶಿಸಿದರು.
ತಹಸೀಲ್ದಾರ್ ಶ್ರೀದರ್ ಕಂಕನವಾಡಿ, ಮುಜರಾಯಿ ತಹಸೀಲ್ದಾರ್ ಲತಾ, ದೇಗುಲದ ಇಒ ಯೋಗೀಶ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ತೆಪ್ಪೋತ್ಸವ ಸೇವಾರ್ಥದಾರ ಬಾಳೆಹಣ್ಣು ರಮೇಶ್, ಅಡ್ಡೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಮಾಜಿ ಧರ್ಮದರ್ಶಿಗಳಾದ ರಂಗನಾಥ್, ಕೇಶವಮೂರ್ತಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.
ಚಿತ್ರ:3(ಬಿಎಲ್‌ಆರ್)1-