ಹಳೇಬೀಡಿನ ವಿಠ್ಠಲ ರುಕುಮಾಯಿ ದೇಗುಲದ ವಾರ್ಷಿಕ ದಿಂಡಿ ಉತ್ಸವ ಪ್ರಯುಕ್ತ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. 
ಹಾಸನ

ರುಕುಮಾಯಿ ದೇಗುಲದಲ್ಲಿ ವೈಭವದ ದಿಂಡಿ ಉತ್ಸವ

ಹಳೇಬೀಡು: ಇಲ್ಲಿನ ವಿಠ್ಠಲ ರುಕುಮಾಯಿ ದೇಗುಲದಲ್ಲಿ ವಾರ್ಷಿಕ ದಿಂಡಿ ಉತ್ಸವ ಭಾನುವಾರ ವೈಭವದಿಂದ ಜರುಗಿತು.
ಉತ್ಸವದ ಪ್ರಯುಕ್ತ ಶನಿವಾರ ಮುಂಜಾನೆ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಅನಂತರ ಫಂಡರಿ ಸಂಪ್ರದಾಯದಂತೆ ಜ್ಞಾನೇಶ್ವರೀ (ಪೋತಿ) ಗ್ರಂಥವನ್ನು ತಲೆಯ ಮೇಲೆ ಹೊತ್ತು ದೇಗುಲವನ್ನು ಮೂರು ಪ್ರದಕ್ಷಣೆ ಮಾಡಿದ ಬಳಿಕ ಮಂಟಪದೊಳಗೆ ಪ್ರತಿಷ್ಠಾಪಿಸಿ ಸಾಂಪ್ರದಾಯಿಕ ಪೂಜೆ ಹಾಗೂ ಆರತಿ ನೆರವೇರಿಸಲಾಯಿತು. ಅಂದು ರಾತ್ರಿಯಿಂದ ಆರಂಭವಾದ ಜಾಗರಣೆ ಕಾರ್ಯಕ್ರಮ ಅಖಂಡ ಭಜನೆ, ಪಾಳಿ ಭಜನೆ, ಭಾರೂಡ್, ಸಂತವಾಣಿ ಹಾಗೂ ವಿವಿಧ ಸಂಗೀತ ಕಾರ್ಯಕ್ರಮಗಳೊಂದಿಗೆ ಭಾನುವಾರ ಮುಂಜಾನೆವರೆಗೂ ಮುಂದುವರಿಯಿತು. ನಸುಕಿನಲ್ಲಿ ದೇವರಿಗೆ ಹಾಗೂ ಗ್ರಂಥಕ್ಕೆ ಕಾಕಡಾರತಿ ನೆರವೇರಿಸಿ ಜಾಗರಣೆನ್ನು ಸಮಾಪ್ತಿಗೊಳಿಸಲಾಯಿತು.
ಅಖಂಡ ಜಾಗರಣೆ ಬಳಿಕ ವಿಠ್ಠಲ ರುಕುಮಾಯಿ ಉತ್ಸವ ದೇವರ ಸಹಿತ ಜ್ಞಾನೇಶ್ವರಿ ಗ್ರಂಥವನ್ನು ಪುಷ್ಪಾಲಂಕೃತ ಮಂಟಪದಲ್ಲಿ ಕೂರಿಸಿ ಅರ್ಚಕರು ಹಾಗೂ ವಾರ್ಕರಿಗಳು ವಿವಿಧ ಪೂಜೆಗಳನ್ನು ಸಲ್ಲಿಸಿದರು. ಬಳಿಕ ರಾಜಬೀದಿ ಉತ್ಸವ ನಡೆಯಿತು. ವಿವಿಧೆಡೆಯಿಂದ ಬಂದಿದ್ದ ಸಂತರು ಹಾಗೂ ವಾರ್ಕರಿಗಳು ಉತ್ಸವದ ಉದ್ದಕ್ಕೂ ಅಭಂಗಗೀತೆಗಳನ್ನು ಹಾಡುತ್ತಾ ಸಾಗಿದರು. ಆಕರ್ಷಕ ಸಮವಸ್ತ್ರ ಧರಿಸಿದ್ದ ಮಹಿಳೆಯರು ಪರಸ್ಪರ ಕೈ ಹಿಡಿದು ನರ್ತಿಸಿದರೆ, ಪುರುಷರು ವೀಣೆ, ತಂಬೂರಿ, ತಾಳ ಹಾಗೂ ಮೃದಂಗವನ್ನು ಹಿಡಿದು ಸಂತರ ಪದಗಳನ್ನು ಹಾಡುತ್ತಾ ಉತ್ಸವದ ಕಳೆ ಹೆಚ್ಚಿಸಿದರು.
ಇದಲ್ಲದೆ ಮಕ್ಕಳು ಕೃಷ್ಣ, ರುಕ್ಮಿಣಿ ಮತ್ತಿತರ ದೇವತೆಗಳ ವೇಷ ಧರಿಸಿ ಗಮನ ಸೆಳೆದರಲ್ಲದೆ, ಕೈ-ಕೈಹಿಡಿದು ನರ್ತಿಸಿ ಮೆರವಣಿಗೆಗೆ ವಿಶೇಷ ಮೆರುಗು ತಂದುಕೊಟ್ಟರು. ಉತ್ಸವ ಸ್ವಸ್ಥಾನ ತಲುಪಿದ ಬಳಿಕ ಸಂಪ್ರದಾಯದಂತೆ ಕಾಲ ಕೀರ್ತನೆ ಹಾಗೂ ಹಾಡಿ ಮೂಲ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ತೀರ್ಥ-ಪ್ರಸಾದ ವಿನಿಯೋಗ ಹಾಗೂ ಅನ್ನದಾನ ಕಾರ್ಯಕ್ರಮದೊಂದಿಗೆ ದಿಂಡಿ ಉತ್ಸವ ಸಂಪನ್ನಗೊಂಡಿತು.
ಮುಖ್ಯ ಕೀರ್ತನಕಾರಕಾರರಾಗಿ ಭದ್ರಾವತಿಯ ವಾರ್ಕರಿ ಸಮೂಹವು ಪಾಲ್ಗೊಡು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹೋಬಳಿ ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಬಿ.ಸಿ.ತುಕಾರಾಂ ರಾವ್, ಗೌರವಾಧ್ಯಕ್ಷ ಬಿ.ಸಿ.ಮೂರ್ತಿರಾವ್, ಯುವಕ ಮಂಡಳಿ ಹಾಗೂ ಭಾವಸಾರ ಮಹಿಳಾ ಸಮಾಜದ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.