ಅರಸೀಕೆರೆ ಗ್ರಾಮಾಂತರ ತಾಲೂಕು ಮಾಡಾಳು ಗ್ರಾಮದ ಶ್ರೀ ಸ್ವರ್ಣಗೌರಮ್ಮ ದೇವಿ ದೇವಾಲಯದಲ್ಲಿ ಬಾದಾಮಿ ಅಮಾವಾಸ್ಯೆ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮ ದೇವಿ ದೇವಾಲಯದಲ್ಲಿ ಬಾದಾಮಿ ಅಮಾವಾಸ್ಯೆ ಅಂಗವಾಗಿ ಅಮ್ಮನವರಿಗೆ ಶನಿವಾರ ರಾತ್ರಿ ವಿಶೇಷ ಪೂಜೆ ಜರುಗಿದವು.
ಕೋಡಿಮಠದ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಸಂಕಲ್ಪದಂತೆ ಪ್ರತಿ ತಿಂಗಳು ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ. ಆದರೆ ಈ ಬಾರಿ 12 ವರ್ಷಕ್ಕೊಮ್ಮೆ ಬರುವ ಬಾದಾಮಿ ಅಮಾವಾಸ್ಯೆ ನಿಮಿತ್ತ ಅಮ್ಮನವರ ಮೂರ್ತಿಯನ್ನು ನಾನಾ ಹೂಗಳಿಂದ ಅಲಂಕರಿಸಲಾಗಿತ್ತು. ದೇವಾಲಯವನ್ನು ಮಾವಿನ ತೋರಣ, ಬಾಳೆಕಂದು, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ರಾತ್ರಿ ಶ್ರೀ ಗೌರಮ್ಮ ದೇವಿ, ಶ್ರೀ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗೆ ಅರ್ಚಕರು ಮಹಾಮಂಗಳಾರತಿ ಸಲ್ಲಿಸಿದರು. ಬೆಂಗಳೂರಿನ ಸಾಗರ್ ಪರಮಶಿವಯ್ಯ ಹಾಗೂ ಕಾವ್ಯಶ್ರೀ, ಡಿ.ಎಸ್.ದೊಡ್ಡ ಎಣ್ಣೇಗೆರೆ ಎಂಬುವರು ದಾಸೋಹ ವ್ಯವಸ್ಥೆ ಮಾಡಿಸಿದ್ದರು. ಹಾರನಹಳ್ಳಿ, ಅಣ್ಣಾಯಕನಹಳ್ಳ, ಯೆಳವಾರೆ, ಸೀತಾಪುರ ಕೊಪ್ಪಲು, ಯರೇಹಳ್ಳಿ, ಡಿ.ಎಂ.ಕುರ್ಕೆ, ಶಶಿವಾಳ ವೈ.ಜಿ.ಹಳ್ಳಿ, ಪಿ.ಹೊಸಳ್ಳಿ, ಕಿತ್ತನಕೆರೆ, ದೋಣನಕಟ್ಟೆ, ಬೊಮ್ಮಸಮುದ್ರ, ಕಡಲಮಗ್ಗೆ, ಶಂಕರನಹಳ್ಳಿ ಗ್ರಾಮಗಳಿಂದ ಜನರು ಆಗಮಿಸಿ ದರ್ಶನ ಪಡೆದರು.