ಶ್ರೀ ಕ್ಷೇತ್ರ ಮಾಡಾಳಿನ ಮೂಲಸ್ಥಾನದ ಶ್ರೀ ಸ್ವರ್ಣ ಗೌರಮ್ಮನವರು.
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮ ದೇವಿ ದೇವಾಲಯದಲ್ಲಿ ಯುಗಾದಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಗುರುವಾರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಸಂಪ್ರದಾಯದಂತೆ ಪ್ರತಿ ಅಮಾವಾಸ್ಯೆಯಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಈ ಬಾರಿ ಯುಗಾದಿ ಹಬ್ಬ ಹಾಗೂ ಅಮಾವಾಸ್ಯೆ ನಿಮಿತ್ತ ಅಮ್ಮನವರಿಗೆ ಬಣ್ಣ ಬಣ್ಣದ ಹೂಗಳಿಂದ ವಿಶೇಷ ಅಲಂಕಾರ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು. ಮುಂಜಾನೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಿತು. ರಾತ್ರಿ ವೇಳೆಗೆ ಕೋಡಿಮಠ ಗದ್ದುಗೆಯಲ್ಲಿನ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಮತ್ತು ಅಮ್ಮನವರಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ಕಡಲಮಗೆ ಗ್ರಾಮಸ್ಥರು ದಾಸೋಹ ವ್ಯವಸ್ಥೆ ಕಲ್ಪಿಸಿದ್ದರು. ಮಾಡಾಳು ಗ್ರಾಮಸ್ಥರು ಸೇರಿದಂತೆ ಸೀತಾಪುರ ಕೊಪ್ಪಲು, ಯೆರೆಹಳ್ಳಿ, ಡಿಎಂ ಕುರ್ಕೆಸಸಿವಾಳ, ರಾಂಪುರ, ಸೊಪ್ಪಿನ ಹಳ್ಳಿ, ದಿಬ್ಬೂರು, ವೈಜಿ ಹಳ್ಳಿ, ಪಿ. ಹೊಸಳ್ಳಿ, ಕಿತ್ತನಕೆರೆ, ದೋಣನ ಬೊಮ್ಮ ಸಮುದ್ರ, ಶಂಕರನಹಳ್ಳಿ, ಮದ್ದರಹಳ್ಳಿ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.