ಹನುಮದ್ ವ್ರತದ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. 
ಹಾಸನ

ನಗರದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ನಗರದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ
  • ಹನುಮದ್ ವ್ರತದ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ
ಹಾಸನ; ಹನುಮದ್ ವ್ರತದ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬಹುತೇಕ ಕಡೆ ಮೆರವಣಿಗೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಗರದ ರೈಲ್ವೆ ನಿಲ್ದಾಣ ಎದುರಿರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬೆಳಗ್ಗೆಯಿಂದ ಸಂಜೆವರೆಗೂ ವಿವಿಧ ಸೇವಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಯಶಸ್ವಿಯಾಗಿ ನೆರವೇರಿಸಲಾಯಿತು.
ಬೆಳಗ್ಗೆ ಸುಪ್ರಭಾತ ಸೇವೆ, ಅಭಿಷೇಕ, 8 ಗಂಟೆಗೆ ಮಹಾಮಂಗಳಾರತಿ, 9ಕ್ಕೆ ಮಾರುತಿ ಹೋಮ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ಮಧ್ಯಾಹ್ನ 12.30ಕ್ಕೆ ಸಾವಿರಾರು ಜನರಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನೆರವೇರಿಸಿದರು.
ಸಂಜೆ 7.30ಕ್ಕೆ ಮಾರುತಿ ಉತ್ಸವ ವಿಜೃಂಭಣೆಯಿಂದ ಜರುಗಿತು. ರಾತ್ರಿ 9.30ಕ್ಕೆ ಮಹಾಮಂಗಳಾರತಿ ಹಾಗೂ ಲಾಲಿ ಕಾರ್ಯಕ್ರಮ ನೆರವೇರಿತು. ಈ ಬಗ್ಗೆ ಮಾತನಾಡಿದ ದೇವಾಲಯದ ಅರ್ಚಕ ರಕ್ಷಿತ್ ಭಾರಧ್ವಾಜ್, ಶ್ರೀ ಆಂಜನೇಯ, ಸುಬ್ರಮಣ್ಯ ದೇವಸ್ಥಾನದಲ್ಲಿ ಈ ವರ್ಷವೂ ಹನುಮದ್ ವ್ರತವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇವತ್ತು ಮಾರುತಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ದೇವಾಲಯದಲ್ಲಿ ಅಲಂಕಾರಕ್ಕೂ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ ಎಂದರು.
ಸಾವಿರಾರು ಜನರಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಮಾಡಲಾಗಿದ್ದು, ಭಗವಂತನು ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು. ಅಂತೆಯೇ ದೇವಿಗೆರೆ ಬಳಿಯ ಶ್ರೀ ನೀರುಬಾಗಿಲು ಆಂಜನೇಯ ದೇವಸ್ಥಾನ ಹಾಗೂ ಜವರಾಯಪಟ್ಟಣದ ದೇವಸ್ಥಾನ ಸೇರಿದಂತೆ ವಿವಿಧ ಭಾಗಗಳಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.