ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಬೇಲೂರಿನ ಜೆ.ಪಿ. ನಗರದಲ್ಲಿರುವ ಸಂತ ಮೈಕೇಲರ ಚರ್ಚ್ ವಿದ್ಯುತ್ ಹಾಗೂ ನಕ್ಷತ್ರಾಕಾರದ ದೀಪಗಳಿಂದ ಕಂಗೊಳಿಸಿತು.
ಬೇಲೂರು; ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಪಟ್ಟಣದ ಜೆ.ಪಿ. ನಗರದಲ್ಲಿರುವ ಸಂತ ಮೈಕೇಲರ ಚರ್ಚ್‌ನಲ್ಲಿ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್‌ಮಸ್ ಸಂಭ್ರಮದ ಹಿನ್ನೆಲೆಯಲ್ಲಿ ಚರ್ಚ್ ಆವರಣವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳು, ನಕ್ಷತ್ರಾಕಾರದ ದೀಪಗಳು ಹಾಗೂ ಹೂವಿನಿಂದ ಸಿಂಗರಿಸಲಾಗಿತ್ತು. ನಂತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಕ್ರಿಸ್‌ಮಸ್ ಹಬ್ಬದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಆಶೀರ್ವಚನ ನೀಡಿದ ಫಾ.ಪ್ರಸನ್ನ ಕುಮಾರ್, ಯೇಸು ಕ್ರಿಸ್ತರ ಜನನ ಕೇವಲ ಧಾರ್ಮಿಕ ಆಚರಣೆಗೆ ಮಾತ್ರವಲ್ಲದೆ ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಶಾಂತಿ, ಪ್ರೀತಿ, ಸಹನೆ, ಸಹೋದರತ್ವ, ತ್ಯಾಗ ಹಾಗೂ ಕ್ಷಮೆ ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ ಕರೆ ನೀಡಿದರು.
ಇನ್‌ಸ್ಪೆಕ್ಟರ್ ರೇವಣ್ಣ ಮಾತನಾಡಿ, ಹಬ್ಬಗಳು ಸಮಾಜ ಹಾಗೂ ಸಮುದಾಯವನ್ನು ಒಗ್ಗೂಡಿಸುವ ಸಂದರ್ಭಗಳಾಗಿವೆ. ಎಲ್ಲ ಧರ್ಮಗಳೂ ಶಾಂತಿ ಮತ್ತು ಮಾನವೀಯತೆ ಸಾರುತ್ತವೆ. ಕಾನೂನು ಪಾಲನೆ, ಪರಸ್ಪರ ಗೌರವ ಹಾಗೂ ಸಹಕಾರದಿಂದ ಸಮಾಜವನ್ನು ಸುಂದರವಾಗಿ ಕಟ್ಟಬಹುದು. ಹಬ್ಬದ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.
ಯೇಸು ಶಿಶುವಿನ ಜನನದ ಕುರಿತು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಕ್ತರು ಮೇಣದ ಬತಿಗಳನ್ನುಬೆಳಗಿಸಿ ದೇವರ ಆಶೀರ್ವಾದ ಕೋರಿದರು. ನೆರೆದಿದ್ದ ಭಕ್ತರಿಂದ ಕ್ರಿಸ್‌ಮಸ್ ಗೀತೆಗಳ ಹಾಡಿದರು. ಪ್ರಾರ್ಥನೆಯ ನಂತರ ಭಕ್ತರು ಪರಸ್ಪರ ಕ್ರಿಸ್ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು. ವಿವಿಧ ಸಮುದಾಯಗಳ ಜನರು ಭಾಗವಹಿಸಿದ್ದರು.