ಆಷಾಢ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ಪಟ್ಟಣದ ದೇವಂಗ ಬೀದಿಯ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗಿರಿಯಪ್ಪಶೆಟ್ಟಿ, ಸಮುದಾಯದ ಮುಖಂಡರು ಭಾಗಿಯಾಗಿದ್ದರು.
ಬೇಲೂರು: ಆಷಾಢ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ಪಟ್ಟಣದ ದೇವಾಂಗ ಬೀದಿಯ ಶ್ರೀಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ದೇವಾಂಗ ಸಮುದಾಯದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ತಾಯಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಶಕ್ತಿ ಸ್ವರೂಪಿಣಿ ಶ್ರೀಚೌಡೇಶ್ವರಿ ಅಮ್ಮನವರು ದೇವಾಂಗ ಸಮುದಾಯದ ಆರಾಧ್ಯ ದೈವವಾಗಿದ್ದು, ಭಕ್ತರ ಇಷ್ಟಾರ್ಥ ಈಡೇರಿಕೆ, ಆರೋಗ್ಯ ಹಾಗೂ ಸಮೃದ್ಧಿಗಾಗಿ ತಾಯಿಯನ್ನು ಭಕ್ತಿಭಾವದಿಂದ ಆರಾಧಿಸುತ್ತಾರೆ. ವಿಶೇಷವಾಗಿ ಆಷಾಢ ಮಾಸದ ಶುಕ್ರವಾರಗಳಲ್ಲಿ ತಾಯಿಗೆ ಅರಿಶಿನ-ಕುಂಕುಮ ಸಮರ್ಪಿಸಿ ಪೂಜೆ ಸಲ್ಲಿಸುವುದರಿಂದ ಸೌಭಾಗ್ಯ, ಐಶ್ವರ್ಯ ಮತ್ತು ನೆಮ್ಮದಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ದೇವರಿಗೆ ಅಭಿಷೇಕ, ಅಲಂಕಾರ, ಅರ್ಚನೆ, ಅರಿಶಿನ-ಕುಂಕುಮ ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತರು ಭಕ್ತಿಯಿಂದ ನಮಿಸಿದರು. ನಂತರ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ದೇವಾಂಗ ಸಂಘದ ಗೌರವಾಧ್ಯಕ್ಷ ಗಿರಿಯಪ್ಪಶೆಟ್ಟಿ ಮಾತನಾಡಿ, ದೇವಾಂಗ ಸಮುದಾಯದ ಎಲ್ಲರ ಸಹಕಾರ, ದಾನಿಗಳ ನೆರವು ಹಾಗೂ ಭಕ್ತರ ಸೇವಾ ಮನೋಭಾವದಿಂದ ದೇವಸ್ಥಾನದಲ್ಲಿ ಪ್ರತಿವರ್ಷ ಆಷಾಢ ಶುಕ್ರವಾರ ವಿಶೇಷ ಪೂಜಾ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನಡೆಸಲಾಗುತ್ತಿದೆ. ತಾಯಿ ಚೌಡೇಶ್ವರಿ ಎಲ್ಲರಿಗೂ ಆಯುರಾರೋಗ್ಯ, ಸುಖ-ಶಾಂತಿ, ಸಮೃದ್ಧಿ ಕರುಣಿಸಲಿ ಎಂದರು.
ಮಹಿಳಾ ಭಜನಾ ಮಂಡಳಿ ಸದಸ್ಯರು, ದೇವಾಂಗ ಸಮುದಾಯದ ಮುಖಂಡರು, ಯುವಕರು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.