ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಸಂದರ್ಭ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ದೇಗುಲಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಚರ್ಚಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ. 
ಹಾಸನ

ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಎಸ್ಪಿ

ರವಿಕುಮಾರ್ ಪಿ. ಕೆ
ಬೇಲೂರು: ಇತಿಹಾಸ ಪ್ರಸಿದ್ಧ ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವವು 15 ದಿನಗಳ ಕಾಲ ನಡೆಯುವುದಲ್ಲದೆ, ಬ್ರಹ್ಮರಥೋತ್ಸವ ಮತ್ತು ನಾಡ ರಥೋತ್ಸವದ ಅಂಗವಾಗಿ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರು ಬುಧವಾರ ಸಂಜೆ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದೇ ಸಂದರ್ಭ ದೇವಾಲಯದ ಆವರಣ, ಪ್ರವೇಶ ದ್ವಾರಗಳು, ರಥೋತ್ಸವ ತೆರಳುವ ಮಾರ್ಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆ ಹೇಗಿರಬೇಕೆಂಬ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಿದರು.
ಜಾತ್ರಾ ಮಹೋತ್ಸವದ ಸಂದರ್ಭ ಭಕ್ತರು ಹೆಚ್ಚಿನ ಸಂಖ್ಯೆಯನ್ನು ಬರುವುದನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮ ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಾಗಳ ಅಳವಡಿಕೆ ಮತ್ತು ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ಸ್ಥಳ ಗುರುತಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚಸಿದರು.
ನಂತರ ಅಡಿಷನಲ್ ಎಸ್‌ಪಿ ತಮ್ಮಯ್ಯ, ದೇಗುಲದ ಯೋಗೀಶ್, ಅರಸೀಕೆರೆ ಡಿವೈಎಸ್‌ಪಿ ಗೋಪಿ. ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೊದಿಗೆ ಭದ್ರತಾ ವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದಲ್ಲದೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು ಜಾತ್ರಾ ಮಹೋತ್ಸವವು ಶಾಂತಿಯುತ ಹಾಗೂ ಸುರಕ್ಷಿತವಾಗಿ ನಡೆಯಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.