ಬೇಲೂರು ತಾಲೂಕಿನ ಗಂಗಾವರ ಗ್ರಾಮದಲ್ಲಿ ಕಾಡಾನೆ ಚಲನವಲನ ಗಮನಿಸುತಿದ್ದ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಜೀಪನ್ನೇ ಅಟ್ಟಾಡಿಸುತ್ತಿರುವ ಕಾಡಾನೆ.  
ಹಾಸನ

ಇಟಿಎಫ್ ಸಿಬ್ಬಂದಿ ಜೀಪನ್ನೇ ಅಟ್ಟಾಡಿಸಿದ ಒಂಟಿ ಸಲಗ

ಪ್ರಮುಖ ಮುಖ್ಯಾಂಶಗಳು

  • ಗಂಗಾವರ ಗ್ರಾಮದಲ್ಲಿ ಘಟನೆ
  • ಕೆಲಹೊತ್ತು ಆತಂಕ ಸೃಷ್ಟಿಸಿದ ಗಜ
ಬೇಲೂರು: ತಾಲೂಕಿನ ಗಂಗಾವರದಲ್ಲಿ ಮಂಗಳವಾರ ಬೆಳಗ್ಗೆ ಕಾಡಾನೆಗಳ ಚಲನವಲನ ಗಮನಿಸುತ್ತಿದ್ದ ಇಟಿಎಫ್ ಸಿಬ್ಬಂದಿ ಜೀಪನ್ನೇ ಒಂಟಿ ಸಲಗವೊಂದು ಅಟ್ಟಾಡಿಸಿ ಕೆಲಹೊತ್ತು ಆತಂಕ ಸೃಷ್ಟಿಸಿತ್ತು.
ಅರೇಹಳ್ಳಿ ಹೋಬಳಿಯ ಕೋಗೋಡು ಸಮೀಪದ ಎಸ್ಟೇಟ್‌ನಲ್ಲಿ ಕಳೆದ ತಿಂಗಳಷ್ಟೆ ದಸರಾ ಸಾಕಾನೆಗಳ ಸಹಾಯದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಒಂದು ಕಾಡಾನೆಯನ್ನು ಹಿಡಿದು ದುಬಾರೆ ಅರಣ್ಯಕ್ಕೆ ಸಾಗಿಸಿದರೆ, ಮತ್ತೆ ಎರಡು ಕಾಡಾನೆಗಳಿಗೆ ಹೊಸದಾದ ದೇಶೀಯ ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಟ್ಟಿದ್ದರು. ಇದರ ನಡುವೆ 30ಕ್ಕೂ ಹೆಚ್ಚು ಕಾಡಾನೆಗಳು ಈ ಗ್ರಾಮಗಳ ಭಾಗದ ತೋಟಗಳಲ್ಲೇ ದಿನನಿತ್ಯ ಓಡಾಡುತ್ತಿವೆ. ಇದರ ನಡುವೆಯೇ ಕಾಡಾನೆ ಹಿಂಡಿನಿಂದ ಬೇರಾದ ಕಾಡಾನೆಯೊಂದು ಒಂಟಿಯಾಗಿಯೇ ಸಾರ್ವಜನಿಕರು, ಕೂಲಿ ಕಾರ್ಮಿಕರನ್ನು ಆಗಿಂದಾಗ್ಗೆ ಅಟ್ಟಾಡಿಸುತ್ತಿದೆ.
ಮಂಗಳವಾರ ಬೆಳಗ್ಗೆ ಗ್ರಾಮದ ತುಂಬೆಲ್ಲ ಓಡಾಡಿದ್ದರಿಂದ ಮನೆಯಿಂದ ಯಾರೂ ಹೊರಗೆ ಬಾರದಂತಾಗಿತ್ತು. ಗ್ರಾಮದಿಂದ ನೇರವಾಗಿ ಹೋದ ಕಾಡಾನೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದೊಳಗೆಲ್ಲ ಓಡಾಡುವ ಮೂಲಕ ಆತಂಕ ಸೃಷ್ಟಿಸಿ ಮತ್ತೆ ಸಮೀಪದ ತೋಟದೊಳಕ್ಕೆ ಹೋಗಿದೆ. ಈ ವೇಳೆ ಒಂಟಿ ಕಾಡಾನೆ ಸೇರಿದಂತೆ ಇತರ ಆನೆಗಳ ಚಲನವಲನ್ನು ಡ್ರೋನ್ ಕ್ಯಾಮರಾ ಮೂಲಕ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಗಮನಿಸುತ್ತಿದ್ದ ಸಂದರ್ಭದಲ್ಲೇ ತೋಟದೊಳಗಿನಿಂದ ಏಕಾಏಕಿ ಹೊರಬಂದ ಕಾಡಾನೆ ಇಟಿಎಫ್ ಸಿಬ್ಬಂದಿ ಇದ್ದ ಜೀಪನ್ನೇ ಅಟ್ಟಾಡಿಸಿಕೊಂಡು ಕೆಲ ದೂರ ಹೋಗಿದೆ. ಈ ವೇಳೆ ಎಚ್ಚೆತ್ತ ಚಾಲಕ ಮತ್ತು ಸಿಬ್ಬಂದಿ ಹಿಮ್ಮುಖವಾಗಿ ಜೀಪನ್ನು ವೇಗವಾಗಿ ಚಲಾಯಿಸಿದ್ದರಿಂದ ದೊಡ್ಡ ಅವಘಡ ತಪ್ಪಿದೆ. ಈ ಬಳಿಕ ಈ ಒಂಟಿ ಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಕೊನೆಗೂ ಕಂಬಿದಿಣ್ಣೆಯ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡಿಗೆ ಸೇರಿಸಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಯಿತು.