ಚನ್ನರಾಯಪಟ್ಟಣ ಪುರಸಭೆ ಕಾರ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛತಾ ಜಾಗೃತಿ ಜಾಥಾದಲ್ಲಿ ಶಾಸಕ ಸಿ ಎನ್ ಬಾಲಕೃಷ್ಣ ಪಾಲ್ಗೊಂಡಿದ್ದರು. ಚರಣ್ ಗೌಡ, ಬಿ.ಆರ್. ರಮೇಶ್, ಆರ್.ಯತೀಶ್ ಕುಮಾರ್ ಇತರರಿದ್ದರು. 
ಹಾಸನ

ಘನತ್ಯಾಜ್ಯ ನಿರ್ವಹಣೆ ದೇಶದ ದೊಡ್ಡ ಸಮಸ್ಯೆ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ ಅಭಿಮತ
ಚನ್ನರಾಯಪಟ್ಟಣ : ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆ ಜತೆಗೆ ತಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದರಿಂದ ಸ್ವಚ್ಛಭಾರತ ನಿರ್ಮಾಣ ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. 
ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಹೊಣೆ ಹಾಗೂ ಜವಾಬ್ದಾರಿಯಾಗಬೇಕು. ನಾವು ಬಳಸುವ ಪ್ಲಾಸ್ಟಿಕ್‌ನಿಂದ ಯಾವ ರೀತಿ ಹಾನಿಯಾಗುತ್ತಿದೆ ಎಂದು ಜನಸಾಮಾನ್ಯರಿಗೆ ಅರಿವು ಇಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಇಂದು ದೇಶ ಎದುರಿಸುವ ದೊಡ್ಡ ಸಮಸ್ಯೆ ಘನತ್ಯಾಜ್ಯ ನಿರ್ವಹಣೆ. ಆದ್ದರಿಂದ ನಮ್ಮ ದೇಶವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸ್ವಚ್ಛತೆ ಕೇವಲ ಕಾರ್ಯಕ್ರಮ ಹಾಗೂ ಅಭಿಯಾನಕ್ಕೆ ಸೀಮಿತವಾಗದೆ, ದಿನ ನಿತ್ಯದ ಚಟುವಟಿಕೆಯ ಭಾಗವಾಗಬೇಕು ಎಂದು ತಿಳಿಸಿದರು.
ಪುರಸಭಾ ವ್ಯಾಪ್ತಿಯನ್ನು ಹೊರತುಪಡಿಸಿ ಹೋಬಳಿಯ ಮುಖ್ಯ ರಸ್ತೆಗಳಲ್ಲಿ ರಾತ್ರಿ ಸಮಯ ರಸ್ತೆಗೆ ಕಸವನ್ನು ಸುರಿಯುತ್ತಿದ್ದು, ಕಸ ಸರಿಯುವ ಸ್ಥಳದಲ್ಲಿ ಪುರಸಭೆಯಿಂದ ಎಐ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಸ ಹಾಕುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಸಿದರು.
ಪಟ್ಟಣಕ್ಕೆ ಯುಜಿಡಿ ಸೌಲಭ್ಯವನ್ನು ಕಲ್ಪಿಸಲು 130 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿ ಹಲವಾರು ಬಾರಿ ಮನವಿ ಮಾಡಿದ್ದರು ಅನುದಾನದ ಕೊರತೆಯ ಕಾರಣ ನೀಡಿ ಅನುದಾನ ನೀಡಿಲ್ಲ. ಬರುವ ಆರ್ಥಿಕ ವರ್ಷದಲ್ಲಿ ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದೆಂದು ತಿಳಿಸಿದರು.
ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ತೆರಳಿ ಸ್ವಚ್ಛತೆ ಕುರಿತು ಅರಿವು ಮೂಡಿಸಿದರು. ಪುರಸಭಾ ಮುಖ್ಯ ಅಧಿಕಾರಿ ಆರ್.ಯತೀಶ್ ಕುಮಾರ್, ಕಚೇರಿ ವ್ಯವಸ್ಥಾಪಕಿ ಆಶಾದೇವಿ, ಆರೋಗ್ಯ ನಿರೀಕ್ಷಕ ಮೂರ್ತಿ, ಕಿರಿಯ ಇಂಜಿನಿಯರ್ ಬಸವರಾಜು, ಸಮುದಾಯ ಸಂಘಟನಾಧಿಕಾರಿ ಶಾರದಮ್ಮ,  ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಆರ್.ರಮೇಶ್, ಶಿಕ್ಷಕರಾದ ಪವಿತ್ರಮೇರಿ, ಧನಲಕ್ಷ್ಮೀ, ಈಶ್ವರಾಚಾರಿ, ವೆಂಕಟೇಶ್, ಸುನಂದಾ, ಫಯಾಜ್ ವುಲ್ಲಾ, ನಾಗೇಶ್, ವೆಂಕಟೇಶ್, ತಿಪ್ಪೇಸ್ವಾಮಿ, ಪೌರಕಾರ್ಮಿಕರು ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.