ತೇರಾಪಂಥ್ ಭವನದಲ್ಲಿ ಶಾಸಕ ಸಿಮೆಂಟ್ ಮಂಜು ಶನಿವಾರ ಆಯೋಜಿಸಿದ್ದ 2054ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಕಲೇಶಪುರ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೇವಾ ಚಟುವಟಿಕೆಗಳು ಮಾದರಿಯಾಗಿವೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ತೇರಾಪಂಥ್ ಭವನದಲ್ಲಿ ಶನಿವಾರ ಆಯೋಜಿಸಿದ್ದ 2054ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಧರ್ಮದ ತಳಹದಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಸಮನ್ವಯಗೊಳಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಫಲಾನುಭವಿಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯದ ಬಡವರು, ನಿರ್ಗತಿಕರು ಹಾಗೂ ದುರ್ಬಲ ವರ್ಗದ ಜನರಿಗೆ ನೆರವು ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ. ಇಂತಹ ಮಹತ್ತರ ಸೇವಾ ಕಾರ್ಯಗಳಿಗೆ ಎಲ್ಲರೂ ಬೆಂಬಲಿಸಬೇಕು ಎಂದರು.
ಮದ್ಯಪಾನ ತ್ಯಜಿಸಿ ನವಜೀವನಕ್ಕೆ ಕಾಲಿಟ್ಟವರು ಸಮಾಜದಲ್ಲಿ ಗೌರವಯುತ ಬದುಕು ಸಾಗಿಸಬೇಕು. ಶಿಬಿರ ಮುಗಿಸಿ ಹೋದ ಬಳಿಕ ಯಾವುದೇ ಚಟಗಳಿಗೆ ಒಳಗಾಗಬಾರದು. ಕುಟುಂಬದ ಆಧಾರಸ್ತಂಭಗಳಾಗಿ, ಸಮಾಜದ ಸತ್ಪ್ರಜೆಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ ಮಾತನಾಡಿ, ಮದ್ಯಪಾನವು ಮಹಾಪಾಪ. ಇದು ಕುಟುಂಬ ಮತ್ತು ಸಮಾಜವನ್ನು ಹಾಳು ಮಾಡುತ್ತದೆ ಎಂದರು. ಜೀವನದಲ್ಲಿ ದೊರೆತಿರುವ ಬದಲಾವಣೆಯ ಅವಕಾಶವನ್ನು ಶಿಬಿರಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಮಾಜಿ ಶಾಸಕ ವಿಶ್ವನಾಥ, ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ರೇಖಾ ಸುರೇಶ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಸದಸ್ಯರಾದ ಗಿರೀಶ್, ಉಮಾನಾಥ ಸುವರ್ಣ, ಯೋಜನಾಧಿಕಾರಿ ರಾಜೇಶ, ಮೇಲ್ವಿಚಾರಕ ಚಿರಂತ, ಇತರರು ಹಾಜರಿದ್ದರು.