ಹಾಸನ ನಗರದ ಸಂಸ್ಕೃತ ಭವನದಲ್ಲಿ ಆಲೂರಿನ ಹರ್ಷಿತ ಸಂಸ್ಥೆ ಹಾಗೂ ನಬಾರ್ಡ್ ಆಯೋಜಿಸಿದ್ದ ಮಹಿಳಾ ಸ್ವ ಸ್ವಹಾಯ ಸಂಘದ ಸದಸ್ಯರಿಗೆ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿದರು. ಸಂಸದ ಶ್ರೇಯಸ್ ಪಟೇಲ್, ರೇಣುಕಾ ಶಿವಕುಮಾರ್, ಸುನಿತಾ, ಪಿ.ಅಕ್ಷಯ್ ಇತರರಿದ್ದರು. 
ಹಾಸನ

ಉನ್ನತಿ ಸಾಧಿಸಲು ಕೆಲಸದಲ್ಲಿ ನೈಪುಣ್ಯ ಅಗತ್ಯ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಉನ್ನತಿ ಸಾಧಿಸಲು ಕೆಲಸದಲ್ಲಿ ನೈಪುಣ್ಯ ಅಗತ್ಯ
  • ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಅಭಿಮತ
ಹಾಸನ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರಸ್ತುತ ದಿನಗಳಲ್ಲಿ ಅನೇಕ ಅವಕಾಶಗಳಿದ್ದು, ತರಬೇತಿ ಪಡೆದು ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಸಲಹೆ ನೀಡಿದರು.
ನಗರದ ಅರಳಿಕಟ್ಟೆ ವೃತ್ತದಲ್ಲಿರುವ ಸಂಸ್ಕೃತ ಭವನದಲ್ಲಿ ಆಲೂರಿನ ಹರ್ಷಿತ ಸಂಸ್ಥೆ (ಹಾಸನಾಂಬ ಗ್ರಾಮೀಣ ಕೈಗಾರಿಕಾ ಕೌಶಲ ತರಬೇತಿ ಸಂಸ್ಥೆ) ಹಾಗೂ ನಬಾರ್ಡ್(ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್) ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ಸ್ವ ಸ್ವಹಾಯ ಸಂಘದ ಸದಸ್ಯರಿಗೆ ಅನುಪಯುಕ್ತ ವಸ್ತುಗಳಿಂದ ಗೃಹ ಅಲಂಕಾರಿಕ ತಯಾರಿಕೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಒಳ್ಳೆಯ ಉದ್ದೇಶದಿಂದ ಹರ್ಷಿತ ಸಂಸ್ಥೆಯು ಮಹಿಳೆಯರಿಗೆ ತರಬೇತಿ ನೀಡುತ್ತಿದೆ. ಸ್ಪರ್ಧಾತಕ ಯುಗದಲ್ಲಿ ಪೈಪೋಟಿ ಹೆಚ್ಚಿದೆ. ಯಾವುದೇ ಕ್ಷೇತ್ರದಲ್ಲಿ ಉನ್ನತಿ ಸಾಧಿಸಬೇಕೆಂದರೆ ನೈಪುಣ್ಯತೆ ಬೇಕು. ಗೃಹೋಪಯೋಗಿ ವಸ್ತುಗಳ ತಯಾರಿಕೆ ಮೂಲಕ ಜಿಲ್ಲೆಯ ಮಹಿಳೆಯರು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಗ್ರಾಮೀಣ ಭಾಗದ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವ ಹರ್ಷಿತ ಸಂಸ್ಥೆಯು ಪ್ರಸ್ತುತ ಸಮಾಜದಲ್ಲಿ ತನ್ನದೇ ಆದ ಸ್ವಯಂ ಸೇವೆಯನ್ನು ಮಾಡಿಕೊಂಡು ಬರುತ್ತಿರುವುದು ಪ್ರಶಂಸನೀಯ. ಈ ರೀತಿಯ ಉಚಿತ ತರಬೇತಿಗಳನ್ನು ನೀಡುವುದು ಅನುಪಯುಕ್ತ ವಸ್ತುಗಳಿಂದ ಉತ್ತಮ ಗೃಹ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಸುಂದರ ರೂಪ ಕೊಟ್ಟಿರುವುದು ಅಪರೂಪದ ಸಂಗತಿ. ಇದೇ ರೀತಿ ಹರ್ಷಿತ ಸಂಸ್ಥೆಯು ಹಲವಾರು ಕಾರ್ಯಕ್ರಮ ಮಾಡಿಕೊಂಡು ಬಂದಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಉತ್ತಮ ಒಡನಾಟ ಹೊಂದಿರುವುದು ಶ್ಲಾಘನೀಯ ಎಂದರು.
ಸಂಸ್ಥೆಯ ಅಧ್ಯಕ್ಷ ನಂಜಪ್ಪ ಶೆಟ್ಟಿ ಮಾತನಾಡಿ, ಹರ್ಷಿತ ಸಂಸ್ಥೆಯು ಸದಾ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲು ಶ್ರಮಿಸುತ್ತಿದೆ. ಗ್ರಾಮೀಣ ಭಾಗದ ಸ್ವ ಸ್ವಹಾಯ ಸಂಘಗಳ ಸದಸ್ಯರು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಭವಿಷ್ಯ ಉಜ್ವಲವಾಗಲಿದೆ ಎಂದರು.
ನಬಾರ್ಡ್ ಜಿಲ್ಲಾ ಪ್ರಬಂಧಕಿ ರೇಣುಕಾ ಶಿವಕುಮಾರ್ ಮಾತನಾಡಿದರು. ತರಬೇತಿ ಪಡೆದ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಸುನಿತಾ, ಕೆನರಾ ಬ್ಯಾಂಕ್ ಗ್ರಾಮೀಣ ತರಬೇತಿ ಕೇಂದ್ರದ ನಿರ್ದೇಶಕ ಪಿ.ಅಕ್ಷಯ್, ಸಂಸ್ಥೆಯ ಕಾರ್ಯದರ್ಶಿ ಶೈಲಜಾ, ಜಿಲ್ಲಾ ಸಂಯೋಜಕ ನವೀನ್ ಇತರರಿದ್ದರು.