ಬಿಎಲ್‌ಎ-2 ಏಜೆಂಟರ ತರಬೇತಿ ಕಾರ್ಯಕ್ರಮ 
ಹಾಸನ

ಎಸ್‌ಐಆರ್‌ಗೆ ಎಲ್ಲ ಪಕ್ಷಗಳ ಸಹಕಾರ ಅಗತ್ಯ

ಲೋಕೇಶ್ ಮನು. ಡಿ
ಸಕಲೇಶಪುರ: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಯಶಸ್ವಿ ಹಾಗೂ ಪಾರದರ್ಶಕವಾಗಿರಲು ರಾಜಕೀಯ ಪಕ್ಷಗಳ ಬೂತ್ ಲೆವೆಲ್ ಏಜೆಂಟ್(ಬಿಎಲ್‌ಎ-2)ಗಳು ಸಕ್ರಿಯವಾಗಿ ಸಹಕರಿಸಬೇಕು ಎಂದು ಉಪವಿಭಾಗಾಧಿಕಾರಿ ಹುಲೆಮನೆ ತಿಮ್ಮಣ್ಣ ಹೇಳಿದರು.
ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬಿಎಲ್‌ಎ-2 ಏಜೆಂಟರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಜೂ.30ರಿಂದ ಜು.29ರವರೆಗೆ ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ, ಮತದಾರರಿಗೆ ಎನ್ಯುಮರೇಷನ್ ಫಾರ್ಮ್ ವಿತರಿಸಿ, ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಬಿಎಲ್‌ಎಗಳ ಜವಾಬ್ದಾರಿಯಾಗಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸಬೇಕು ಎಂದರು.
ಸಕಲೇಶಪುರ ಹಾಗೂ ಕಟ್ಟಾಯ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮ್ಯಾಪಿಂಗ್ ಕಾರ್ಯ ಶೇ.96.50ರಷ್ಟು ಪೂರ್ಣಗೊಂಡಿದ್ದು, ಉಳಿದ ಪ್ರಕರಣಗಳ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ವಳಲಹಳ್ಳಿ ಅಶ್ವತ್ ಮಾತನಾಡಿ, ಪಕ್ಷದ 144 ಬೂತ್‌ಗಳ ಬಿಎಲ್‌ಎ-2 ಏಜೆಂಟರು ತರಬೇತಿಯಲ್ಲಿ ಭಾಗವಹಿಸಿದ್ದು, ವಿಶೇಷ ಮತದಾರರ ಪರಿಷ್ಕರಣೆ ಪ್ರಕ್ರಿಯೆಗೆ ಬಿಜೆಪಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು. ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಹಾಗೂ ಅನರ್ಹ ಹೆಸರುಗಳನ್ನು ನಿಯಮಾನುಸಾರ ಕೈಬಿಡುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಕಾಡಪ್ಪ ಮಾತನಾಡಿ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಬೂತ್ ಮಟ್ಟದ ಏಜೆಂಟರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ವಳಲಹಳ್ಳಿ ರುದ್ರೇಶ್ ಮಾತನಾಡಿ, ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ಕಾಂಗ್ರೆಸ್ ಬಿಎಲ್‌ಎಗಳು ಪ್ರಾಮಾಣಿಕವಾಗಿ ಭಾಗವಹಿಸಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಬಿಎಲ್‌ಒಗಳಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಕೀರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಇಒ ಗಂಗಾಧರಪ್ಪ, ಚುನಾವಣಾ ಶಿರಸ್ತೇದಾರ್ ಜನಾರ್ಧನ್, ಶಿರಸ್ತೇದಾರ್ ರವಿ, ಕಾಂಗ್ರೆಸ್ ಮುಖಂಡ ಉದಯ್, ಬಿಜೆಪಿ ಮುಖಂಡ ರಾಜಕುಮಾರ್, ಎಸ್‌ಡಿಪಿಐ ಮುಖಂಡ ಸಿದ್ದಿಕ್ ಆನೆಮಹಲ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಬಿಎಲ್‌ಎ-2 ಏಜೆಂಟರು ಹಾಗೂ ಅಧಿಕಾರಿಗಳು ಇದ್ದರು.