ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಮತ್ತು ಕುಟುಂಬ ಸದಸ್ಯರು ದೇವರಿಗೆ ಪೂಜೆ ಸಲ್ಲಿಸಿ, ದೇಗುಲದಲ್ಲಿನ ವ್ಯವಸ್ಥೆ ಪರಿಶೀಲಿಸಿದರು.
ಬೇಲೂರು: ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಮತ್ತು ಕುಟುಂಬ ಸದಸ್ಯರು ದೇವಾಲಯಕ್ಕೆ ಶನಿವಾರ ರಾತ್ರಿ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಲತಾಕುಮಾರಿ ಮತ್ತು ಕುಟುಂಬ ಸದಸ್ಯರು ದೇವಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯಿಂದ ಸ್ವಾಗತಿಸಲಾಯಿತು. ಶ್ರೀ ಚನ್ನಕೇಶವಸ್ವಾಮಿ ಮತ್ತು ಅಮ್ಮನವರಿಗೆ ಪೂಜೆ ಸಲ್ಲಿಸಿ, ಪುಷ್ಪಹಾರಗಳನ್ನು ನೀಡಲಾಯಿತು. ನಂತರ ಅಮ್ಮನವರ ಸೀರೆಯನ್ನು ಜಿಲ್ಲಾಧಿಕಾರಿಗೆ ನೀಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಲತಾಕುಮಾರಿ. ವಿಶ್ವ ವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಭಕ್ತರಲ್ಲದೆ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದಾರೆ. ರಥೋತ್ಸವಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚರ ವಹಿಸಲಾಗಿದೆ. ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದೆ ಶಾಸ್ತ್ರೋತ್ತವಾಗಿ ಸಾಂಪ್ರದಾಯದಂತೆ ಜಾತ್ರಾ ಮಹೋತ್ಸವ ನೆರವೇರಿಸಲಾಗುವುದು. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಭಕ್ತರಿಗೆ ಕುಡಿಯುವ ನೀರು, ಸ್ಥಾನದ ಗೃಹ, ಶೌಚಗೃಹ, ದಾಸೋಹ ಮತ್ತು ಭದ್ರತೆ ಒದಗಿಸಲಾಗಿದೆ. ಜಾತ್ರಾ ಮಹೋತ್ಸವವನ್ನು ಅದ್ದೂರಿ ಮತ್ತು ಶಾಂತಿಯುತವಾಗಿ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ದೇವಾಲಯ ಇಒ ಯೋಗೇಶ್, ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟರ್, ನರಸಿಂಹ ಪ್ರಿಯ ಭಟ್ಟರ್ ಇದ್ದರು.