ಹಾಸನಾಂಬ ಕಲಾಕ್ಷೇತ್ರದಲ್ಲಿ ಕೆ.ಟಿ.ಶಿವಪ್ರಸಾದ್ ಅಭಿಮಾನಿಗಳ ಬಳಗದಿಂದ ಕೆ.ಟಿ.ಶಿವಪ್ರಸಾದ್ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಚಿ.ಸು.ಕೃಷ್ಣಶೆಟ್ಟಿ, ಆರ್.ಪಿ.ವೆಂಕಟೇಶ್‌ಮೂರ್ತಿ, ಬಾನು ಮುಷ್ತಾಕ್, ಎಚ್.ಎಂ. ವಿಶ್ವನಾಥ್, ಸಿ.ಸುವರ್ಣ, ಜಿ.ಎಲ್.ಮುದ್ದೇಗೌಡ ಇತರರಿದ್ದರು.
- ಕೇಂದ್ರ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಬಣ್ಣನೆ
- ನುಡಿ ನಮನ ಕಾರ್ಯಕ್ರಮ
ಹಾಸನ: ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್ ಅವರು ಸಮಾಜದ ನೋವು-ನಲಿವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟ ಮೇರು ವ್ಯಕ್ತಿ ಎಂದು ಕೇಂದ್ರ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಬಣ್ಣಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕೆ.ಟಿ.ಶಿವಪ್ರಸಾದ್ ಅಭಿಮಾನಿಗಳ ಬಳಗದಿಂದ ಭಾನುವಾರ ಆಯೋಜಿಸಿದ್ದ ಕೆ.ಟಿ.ಶಿವಪ್ರಸಾದ್ ಅವರಿಗೆ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೆ.ಜೆ.ಕಲಾ ಶಾಲೆಯ ಶೈಲಿಯ ಪ್ರಭಾವ ಇದ್ದರೂ ಅದನ್ನು ಮೀರಿ ಹೊಸ ಕಲಾಭಾಷೆಯನ್ನು ರೂಪಿಸಿಕೊಂಡಿದ್ದರು. ಉತ್ತಮ ಓದುಗರಾಗಿದ್ದ ಶಿವಪ್ರಸಾದ್ ಸಾರ್ವಜನಿಕ ವೇದಿಕೆಗಳಲ್ಲಿ ಕಡಿಮೆ ಮಾತನಾಡಿದರೂ ಕಲೆಯೇ ಅವರ ಧ್ವನಿಯಾಗಿತ್ತು ಎಂದು ಹೇಳಿದರು.
ದಲಿತ ಚಳವಳಿಯ ರಾಜ್ಯ ನಾಯಕ ಮಾವಳ್ಳಿ ಶಂಕರ್ ಮಾತನಾಡಿ, ಕೆ.ಟಿ.ಶಿವಪ್ರಸಾದ್ ದಲಿತ ಚಳವಳಿಗೆ ಹೊಸ ಚೈತನ್ಯ ತುಂಬಿದರು. ಅನೇಕ ಯುವ ಹೋರಾಟಗಾರರಿಗೆ ಅವರು ಪ್ರೇರಣೆಯಾಗಿದ್ದರು. ಅವರ ಹೆಸರಿನಲ್ಲಿ ಕಲಾ ಗ್ಯಾಲರಿ ನಿರ್ಮಿಸುವುದು ನಿಜವಾದ ಗೌರವವಾಗಲಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಅವರೊಂದಿಗೆ ನಡೆಯಲಿರುವ ಸಭೆಯಲ್ಲಿ ಕಲಾ ಗ್ಯಾಲರಿಗೆ ಸೂಕ್ತ ಭೂಮಿ ನೀಡುವಂತೆ ಒತ್ತಾಯಿಸಲಾಗುವುದು. ದಲಿತ ಚಳವಳಿ ವಿಚಾರ ಬಂದಾಗ ಕೆ.ಟಿ.ಶಿವಪ್ರಸಾದ್ ಮತ್ತು ತ್ಯಾಗಿ ಅವರಂತಹ ಹೋರಾಟಗಾರರನ್ನು ದಲಿತ ಚಳವಳಿಯ ಇತಿಹಾಸ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಕೆ.ಟಿ.ಶಿವಪ್ರಸಾದ್ ಅಂತಹ ಚಿಂತಕ ಹಾಗೂ ಕಲಾವಿದರನ್ನು ನಾವು ಕಳೆದುಕೊಂಡಿದ್ದೇವೆ. ಹುಟ್ಟು ದುಃಖದಿಂದ ಆರಂಭವಾಗಿ ಮಧ್ಯೆ ಅನಾರೋಗ್ಯದಲ್ಲಿ ಕೊನೆಗೆ ಮರಣ ಅನುಭವಿಸಲೇಬೇಕು. ಸಾವನ್ನು ಕೂಡ ಸಂಭ್ರಮಿಸುವ ಒಳ ಮನಸ್ಸುಇಟ್ಟುಕೊಳ್ಳಬೇಕು. ದುಃಖ, ಹೋರಾಟ ಮತ್ತು ಅನಾರೋಗ್ಯದ ನಡುವೆಯೂ ಮೌಲ್ಯಯುತ ಬದುಕು ಕಟ್ಟಿಕೊಂಡ ಶಿವಪ್ರಸಾದ್ ಅವರ ಜೀವನವೇ ಸಮಾಜಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ.ವೆಂಕಟೇಶ್‌ಮೂರ್ತಿ ಮಾತನಾಡಿ, ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸಿದ್ದ ಶಿವಪ್ರಸಾದ್ ಹಲವು ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಗಡಿಪಾರು ಆದವರ ಪರವಾಗಿ ನಡೆಸಿದ ಹೋರಾಟ, ಜಪ್ತಿ ಪ್ರಕರಣಗಳ ವಿರುದ್ಧದ ಪ್ರತಿಭಟನೆಗಳು ಹಾಗೂ ಗಾಂಧಿ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಜನಸಾಮಾನ್ಯರ ಮನೆ ಮನೆಗೆ ತಲುಪಿಸುವ ಪ್ರಯತ್ನಗಳು ಅವರ ಸಮಾಜಮುಖಿ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದು ಹೇಳಿದರು.
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ, ಸಾಹಿತಿ ಬಾನು ಮುಷ್ತಾಕ್, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಶಿವಪ್ರಸಾದ್ ಅವರ ಪತ್ನಿ ಸಿ.ಸುವರ್ಣ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್.ಮುದ್ದೇಗೌಡ, ನಾರಾಯಣದಾಸ್, ಪಂಕಜಾ ಗೊರೂರು, ಶಂಕರೇಗೌಡ, ಚಿತ್ರಕಲಾವಿದ ಶಂಕರ್, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್.ವಿಜಯಕುಮಾರ್, ಕೆ.ಟಿ.ಶಿವಪ್ರಸಾದ್ ಒಡನಾಡಿಗಳ ಬಳಗದ ಬಿ.ಎಸ್.ದೇಸಾಯಿ, ಎಂ.ಸೋಮಶೇಖರ್, ಧರ್ಮೇಶ್, ಕೃಷ್ಣದಾಸ್, ಎಚ್.ಆರ್.ನವೀನ್ ಕುಮಾರ್, ಚಲಂ ಹಾಡ್ಲಹಳ್ಳಿ ಇತರರಿದ್ದರು.