ಹಾಸನ ನಗರದ ತಣ್ಣೀರುಹಳ್ಳ ಮಠದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ವಿಜಯಕುಮಾರ ಸ್ವಾಮೀಜಿ, ಎಂ.ಎನ್.ಕುಮಾರಸ್ವಾಮಿ, ಕಟ್ಟಾಯ ಶಿವಕುಮಾರ್, ರುದ್ರಸ್ವಾಮಿ, ಆನಂದ್ ಪಟೇಲ್ ಇತರರಿದ್ದರು.
- ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದ ಶಿವಕುಮಾರ ಶ್ರೀ
- ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ ಅಭಿಪ್ರಾಯ
ಹಾಸನ: ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಶ್ರೀಶಿವಕುಮಾರ ಸ್ವಾಮೀಜಿ ಅವರು ಅನ್ನ, ಅಕ್ಷರ ಮತ್ತು ಆಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದ್ದರು ಎಂದು ತಣ್ಣೀರು ಹಳ್ಳ ಮಠದ ಮಠಾಧೀಶ ಶ್ರೀ ವಿಜಯಕುಮಾರ ಸ್ವಾಮೀಜಿ ಹೇಳಿದರು.
ನಗರದ ತಣ್ಣೀರು ಹಳ್ಳ ಮಠದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸೋಮವಾರ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ-ಮತ ಭೇದವಿಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಊಟ ಒದಗಿಸುವ ಮೂಲಕ ಅವರು ಮಾನವೀಯ ಮೌಲ್ಯಗಳನ್ನು ಜೀವಂತಗೊಳಿಸಿದ್ದಾರೆ. ಮಠದ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದ ಸಮಯದಲ್ಲೂ ಶ್ರೀಗಳು ಅಚಲ ಧೈರ್ಯದಿಂದ ಕಾರ್ಯನಿರ್ವಹಿಸಿ, ಭಕ್ತರ ಮನೆ ಮನೆಗೆ ತೆರಳಿ ದವಸ-ಧಾನ್ಯ ಸಂಗ್ರಹಿಸಿ ವಿದ್ಯಾರ್ಥಿ ನಿಲಯಗಳು, ಪ್ರಸಾದ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದರು.
ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಬಡ, ದೀನ, ದಲಿತ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶ ಸಾರಿದರು. ಅವರ ಆದರ್ಶಗಳು ಇಂದಿನ ಯುವಜನತೆಗೆ ಮಾರ್ಗದರ್ಶಕವಾಗಿವೆ ಎಂದರು.
ಕಟ್ಟಾಯ ಶಿವಕುಮಾರ್, ರುದ್ರಸ್ವಾಮಿ, ಸಂಘಟನಾ ಕಾರ್ಯದರ್ಶಿ ಆನಂದ್ ಪಟೇಲ್, ಬೇಲೂರು ತಾಲೂಕು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಅರಕಲಗೂಡು ಅಧ್ಯಕ್ಷ ಅಮೃತೇಶ್, ಕಲ್ಪನಾ ಸಿದ್ದುರಾಜು, ರಾಜಕುಮಾರ, ಧನಂಜಯ, ಮೀನಾಕ್ಷಿ ಖಾದರ್, ಶಾರದಾ ಗುರುಮೂರ್ತಿ, ಭಾವನಾ, ಕಲಾವತಿ, ಪೂಜಾ, ರತ್ನಮ್ಮ, ಅನ್ನಪೂರ್ಣ ಇತರರಿದ್ದರು.