ಡಾ.ನಾ.ಸು.ಹರ್ಡಿಕರ್ ಅವರ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದಲ್ಲಿರುವ ಡಾ.ಹರ್ಡಿಕರ್ ಪ್ರತಿಮೆಗೆ ಪುಷ್ಪಹಾರದ ಮೂಲಕ ಗಣ್ಯರು ಗೌರವ ಸಲ್ಲಿಸಿದರು.
- ಪುರಸಭೆ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಹೇಳಿಕೆ
- ಪ್ರತಿಮೆಗೆ ಪುಷ್ಪ ಹಾರ
ಯುವ ಜನರಲ್ಲಿ ಶಿಸ್ತು, ಸಂಯಮ, ದೇಶಪ್ರೇಮ ಮನೋಭಾವ ಬೆಳೆಸುವಲ್ಲಿ ಭಾರತ ಸೇವಾ ದಳದ ಕಾರ್ಯ ಶ್ಲಾಘನೀಯ ಎಂದು ಭಾರತ ಸೇವಾ ದಳದ ತಾಲೂಕು ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯೆ ತೀರ್ಥ ಕುಮಾರಿ ವೆಂಕಟೇಶ್ ಹೇಳಿದರು.
ಡಾ.ನಾ.ಸು.ಹರ್ಡಿಕರ್ ಅವರ ಪುಣ್ಯಸ್ಮರಣೆ ಅಂಗವಾಗಿ ಬುಧವಾರ ಪಟ್ಟಣದಲ್ಲಿರುವ ಡಾ.ಹರ್ಡಿಕರ್ ಪ್ರತಿಮೆಗೆ ಪುಷ್ಪಹಾರದ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು. ಸ್ವಾತಂತ್ರೃ ಹೋರಾಟಗಾರ ಡಾ.ನಾ.ಸು.ಹರ್ಡಿಕರ್ ಅವರು ಗಾಂಧೀಜಿಯ ಅಹಿಂಸಾ ಮಾರ್ಗದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಿಸ್ತು, ಸಂಯಮ ಹೊಂದಿರುವ ಯುವಕರ ಪಡೆಯನ್ನು ರೂಪಿಸುವ ಉದ್ದೇಶದಿಂದ ಸೇವಾದಳ ಮುನ್ನಡೆಸಿದರು. ಪ್ರಸ್ತುತ ಭಾರತ ಸೇವಾದಳದ ಅಗತ್ಯವಿದ್ದು, ರಾಜಕೀಯೇತರವಾಗಿ ದೇಶಭಕ್ತಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತು ತರಬೇತಿ ನೀಡುವುದರ ಜತೆಗೆ ಯುವಜನರಲ್ಲಿ ಶಿಸ್ತು ಮತ್ತು ದೇಶಭಕ್ತಿ ಮನೋಭಾವ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್ ಮಾತನಾಡಿ, ಸೇವಾ ದಳದ ಸಂಸ್ಥಾಪಕ ಸ್ವಾತಂತ್ರೃ ಹೋರಾಟಗಾರ ಹರ್ಡಿಕರ್ ಅವರ ಪ್ರತಿಮೆ ಇಲ್ಲಿರುವುದು ಹೆಮ್ಮೆಯ ಸಂಗತಿ. ಸೇವಾದಳದ ಕಚೇರಿಗಾಗಿ ನಿವೇಶನ ನೀಡುವಂತೆ ಮನವಿ ಮಾಡಿದ್ದು, ನಮ್ಮ ಅವಧಿ ಮುಗಿಯುವ ಹಂತದಲ್ಲಿರುವುದರಿಂದ ಅಗತ್ಯ ದಾಖಲೆ ಮತ್ತು ಕಾನೂನು ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿದರೆ, ಉಳಿದಿರುವ ಅವಧಿಯಲ್ಲಿಯೇ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸೇವಾದಳದ ಹಾಸನ ಜಿಲ್ಲಾ ವಲಯ ಸಂಘಟಕಿ ವಿ.ಎಸ್ ರಾಣಿ ಮಾತನಾಡಿ, ಸೇವಾ ದಳದ ಸಂಸ್ಥಾಪಕ ಡಾ.ನಾ.ಸು.ಹರ್ಡಿಕರ್ ಅವರ ಪುಣ್ಯಸ್ಮರಣಾ ದಿನವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಭಾರತ ಸೇವಾದಳವು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅವರ ಪ್ರತಿಮೆಯನ್ನು ಬೇಲೂರಿನಲ್ಲಿ ಸ್ಥಾಪಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಭಾರತ ಸೇವಾದಳದಿಂದ ದೇಶಪ್ರೇಮ, ದೇಶಭಕ್ತಿ, ರಾಷ್ಟ್ರಧ್ವಜ ಮತ್ತು ರಾಷ್ಟ್ರ ಗೀತೆಯ ಕುರಿತು ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.
ಶಾಲಾ ಮಕ್ಕಳಿಗೆ ಬ್ಯಾಂಡ್ ವಾದನ ತರಬೇತಿಯನ್ನೂ ನೀಡಲಾಗುತ್ತಿದೆ. ಬೇಲೂರಿನಲ್ಲಿ ಭಾರತ ಸೇವಾದಳದ ರಾಜ್ಯಮಟ್ಟದ ಕಚೇರಿ ಹಾಗೂ ತರಬೇತಿ ಕೇಂದ್ರ ಸ್ಥಾಪನೆಯಾಗಬೇಕೆಂಬುದು ನಮ್ಮ ಆಶಯ. ಇದಕ್ಕೆ ಪುರಸಭೆ ಸದಸ್ಯರ ಸಹಕಾರ ಬೇಕು ಎಂದರು.
ಪುರಸಭಾ ಸದಸ್ಯರಾದ ಸೌಮ್ಯಾ ಸುಬ್ರಹ್ಮಣ್ಯ, ಮುಖಂಡ ಶೇಖರ್, ಶಿಕ್ಷಕ ಪಾಟೀಲ್, ಒಕ್ಕಲಿಗ ಯುವ ವೇದಿಕೆ ಕಾರ್ಯದರ್ಶಿ ಗಣೇಶ್ ಸೇರಿದಂತೆ ಇತರರಿದ್ದರು.