ಹಿರೀಸಾವೆಯ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. ಎಚ್.ಬಿ.ಉಮಾ, ಎಚ್.ಜಿ.ರಾಮಕೃಷ್ಣ, ಎಲ್‌ಎಸ್.ಧರ್ಮೇಶ್, ಯೋಗೇಶ್, ವಿ ಶೋಭಾ, ದೇವಕಿ ಇತರರು ಇದ್ದರು. 
ಹಾಸನ

ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಾಗಲಿ

ಎ. ಆರ್. ರಘುರಾಮ
ಹಿರೀಸಾವೆ : ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಇನ್ನೂ ಹೆಚ್ಚಾಗಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 17 ಲಕ್ಷ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಉಳಿಯಬೇಕು. ಇಲ್ಲಿ ಮಕ್ಕಳಿಗೆ ವಿದ್ಯಾರ್ಜನೆಯಾಗಬೇಕು ಎಂಬ ಉದ್ದೇಶದಿಂದ
ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಮೊಟ್ಟೆ ವಿತರಣೆ, ಸಮವಸ್ತ್ರ, ಪುಸ್ತಕ ಸೇರಿದಂತೆ ಉಚಿತ ಶಿಕ್ಷಣ ನೀಡುವ ಮೂಲಕ ಸರ್ಕಾರವು ಶೈಕ್ಷಣಿಕ ಪ್ರಗತಿಗೆ ಮುಂದಾಗಿದೆ. ಇದನ್ನು ಪಾಲಕರು ಮನಗಂಡು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ತಮ್ಮ ತಮ್ಮ ಗ್ರಾಮದಲ್ಲಿರುವ ವಿದ್ಯಾಕೇಂದ್ರಗಳನ್ನು ಉಳಿಸುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪಿಎಂಶ್ರೀ ಯೋಜನೆಯಡಿ 17 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ಹಾಗೂ 5 ಲಕ್ಷ ರೂ. ವೆಚ್ಚದಲ್ಲಿ ಮೈದಾನದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕಳೆದ ಸಾಲಿನಲ್ಲಿ ಅಡುಗೆ ಕೋಣೆ ನಿರ್ಮಾಣ ಮಾಡಲಾಗಿತ್ತು. ಮುಂದಿನ ಸಾಲಿನಲ್ಲಿ ಹೆಚ್ಚುವರಿ ಅನುದಾನ ಕಲ್ಪಿಸಿ ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಮಾಜಿ ಸದಸ್ಯ ಎಚ್.ಜಿ.ರಾಮಕೃಷ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ. ಮಹೇಶ್, ಮತಿಘಟ್ಟ ಸೊಸೈಟಿ ಮಾಜಿ ಅಧ್ಯಕ್ಷ ಎ.ಜಿ.ಪ್ರಭಾಕರ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮೌರ್ಯ, ಮುಖ್ಯಶಿಕ್ಷಕಿ ಎಚ್.ಬಿ.ಉಮಾ, ಶಿಕ್ಷಕರಾದ ಎಲ್‌ಎಸ್.ಧರ್ಮೇಶ್, ಯೋಗೇಶ್, ವಿನಯ ಎಂ. ಗುನಗ, ಗೌರಮ್ಮ, ಶೋಭಾ, ದೇವಕಿ, ಶ್ವೇತಾ, ರಕ್ಷಿತಾ ಇತರರು ಇದ್ದರು.