ಬಸವನಪುರ ಸರ್ಕಾರಿ ಶಾಲಾ ಮಕ್ಕಳಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗುರುವಾಗ ಲೇಖನ ಸಾಮಗ್ರಿ ವಿತರಿಸಲಾಯಿತು. ಗಂಗಾಧರ ನಾಯ್ಕ, ಶಿವಪ್ಪ, ಬೋರೇಹಳ್ಳಿ ಸೋಮಶೇಖರ್, ಸಾಕಿ ಮಂಜುನಾಥ್, ಕಮಲಮ್ಮ ಇತರರು ಇದ್ದರು.  
ಹಾಸನ

ಕಡ್ಡಾಯ ಶಿಕ್ಷಣ ಕೊಡಿಸುವುದು ಸಮಾಜದ ಜವಾಬ್ದಾರಿ

ಎ. ಆರ್. ರಘುರಾಮ
ಅರಸೀಕೆರೆ ಗ್ರಾಮಾಂತರ : ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವುದು ಸಮಾಜದ ಜವಾಬ್ದಾರಿಯೂ ಆಗಿದೆ ಎಂದು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಮುದುಡಿ ಗಂಗಾಧರ ನಾಯ್ಕ ಹೇಳಿದರು.
ಕರವೇ ವತಿಯಿಂದ ತಾಲೂಕಿನ ಮುದುಡಿ ಬಿ. ತಾಂಡ್ಯ, ಬಸವನಪುರ ಸರ್ಕಾರಿ ಶಾಲಾ ಮಕ್ಕಳಿಗೆ ಗುರುವಾರ ನೋಟ್‌ಬುಕ್ ಮತ್ತಿತರ ಲೇಖನ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಪಾಲಕರ ಮತ್ತು ಶಿಕ್ಷಕರ ಪ್ರೋತ್ಸಾಹ ಬಹು ಮುಖ್ಯ. ಅದರಂತೆಯೇ ಸಮಾಜದ ವಿವಿಧ ರಂಗದ ಪ್ರಮುಖರು ಮತ್ತು ಸಂಘ, ಸಂಸ್ಥೆಗಳ ಮುಖಂಡರು ಚಿಕ್ಕ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಸವಲತ್ತುಗಳನ್ನು ಪೂರೈಸಬೇಕು ಎಂದರು. ಪ್ರತಿಯೊಂದು ಮಗುವೂ ಸಮಾಜದ ಆಸ್ತಿ. ಈ ನಿಟ್ಟಿನಲ್ಲಿ ಎಲ್ಲರೂ ಕಾಳಜಿ ವಹಿಸಬೇಕು ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಶಿವಪ್ಪ ಮಾತನಾಡಿ, ಕನ್ನಡಿಗರ ಧ್ವನಿಯಾಗಿರುವ ಕರ್ನಾಟಕ ರಕ್ಷಣಾ ವೇದಿಕೆ ನಾಡು ನುಡಿ ನೆಲ ಜಲದ ರಕ್ಷಣೆಗೆ ಹೋರಾಟ ಮಾಡುತ್ತಿದೆ. ಇದರೊಂದಿಗೆ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲೂ ಸಮಾಜ ಮುಖಿ ಸೇವೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಮುಖಂಡರಾದ ಬೋರೇಹಳ್ಳಿ ಸೋಮಶೇಖರ್, ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಸಾಕಿ ಮಂಜುನಾಥ್,ಕರವೇ ಮಹಿಳಾ ಘಟಕ ಅಧ್ಯಕ್ಷೆ ಕಮಲಮ್ಮ, ಗಂಗಾಧರ, ಶಿವಪುರ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಅಂಗಡಿ ಶಿವಕುಮಾರ್ ನಾಯಕ್ ಇತರರು ಉಪಸ್ಥಿತರಿದ್ದರು.