ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಟರಿ ಬೆಂಗಳೂರು ದಕ್ಷಿಣ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು.
- 51 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ
- ರೋಟರಿ ಬೆಂಗಳೂರು ದಕ್ಷಿಣ ವತಿಯಿಂದ ನೆರವು
51 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ
ರೋಟರಿ ಬೆಂಗಳೂರು ದಕ್ಷಿಣ ವತಿಯಿಂದ ನೆರವು
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ರೋಟರಿ ಬೆಂಗಳೂರು ದಕ್ಷಿಣ ವತಿಯಿಂದ 7ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಒಟ್ಟು 51 ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕದ ಆಧಾರದಲ್ಲಿ 15 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ದಕ್ಷಿಣ ಜಿಲ್ಲೆಯ ಸದಸ್ಯ, ವಿದ್ಯುತ್ ನಿಗಮದ ಕಾರ್ಯಪಾಲಕ ಇಂಜಿನಿಯರ್ ಸುಮಂತ್ ಮಾತನಾಡಿ, ಸಾಮಾಜಿಕ ಸೇವೆಯ ಮನೋಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ವಿದ್ಯಾರ್ಥಿವೇತನ ಪಡೆದವರು ಇದರ ಸದುಪಯೋಗ ಪಡೆದು ಮುಂದಿನ ದಿನಗಳಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಬಳಿಕ ಸಮಾಜಕ್ಕೆ ಮರಳಿ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ರೋಟರಿ ಬೆಂಗಳೂರು ದಕ್ಷಿಣದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಸಾಚ್ವಿ ಮಾತನಾಡಿ, ಮೊದಲು ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಈಗ ಗ್ರಾಮಾಂತರ ಪ್ರದೇಶಗಳ ಇಂಜಿನಿಯರಿಂಗ್ ಕಾಲೇಜುಗಳಿಗೆ ವಿಸ್ತರಿಸಲಾಗಿದೆ. ಕಳೆದ ಏಳು ವರ್ಷಗಳಿಂದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯುತ್ತಿರುವುದು ಸಂತಸದ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ.ದ್ಯಾವೆಗೌಡ ಮಾತನಾಡಿ, ರೋಟರಿ ಬೆಂಗಳೂರು ದಕ್ಷಿಣ ಸಂಸ್ಥೆಯು ನಿರಂತರವಾಗಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಿದ್ದು, ಇದರಿಂದ ಅನೇಕ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗುತ್ತಿದೆ ಎಂದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಮಾತನಾಡಿ, ಸಂಪನ್ಮೂಲ ಸಂಗ್ರಹಿಸಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಗೆ ನೆರವಾಗುತ್ತಿರುವ ರೋಟರಿ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ಉದ್ಯಮಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಗೋವರ್ಧನ್ ಕುಮಾರ್, ರೋಟರಿ ಸಂಸ್ಥೆಯ ಅಧ್ಯಕ್ಷ ಶಿವರಾಮ್, ಡಿ.ಬಿ. ಹೇಮಂತ್ ಕುಮಾರ್, ಮಲೆನಾಡು ಇಂಟರ್‌ನ್ಯಾಷನಲ್ ಶಾಲೆಯ ಉಪಾಧ್ಯಕ್ಷ ಬಿ.ಆರ್.ರಾಜಶೇಖರ್, ಎವಿಕೆ ಪಿಯು ಕಾಲೇಜಿನ ಉಪಾಧ್ಯಕ್ಷ ನಾಗರಾಜ್ ಜೈನ್, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸುರೇಶ್, ಶಾಂತಿಗ್ರಾಮ ಶಂಕರ್, ಕಾರ್ಯಕ್ರಮ ಸಂಯೋಜಕ ಡಾ.ಜೀವನ್, ಪ್ರಾಧ್ಯಾಪಕಿ ದಿವ್ಯಾ ಇತರರಿದ್ದರು.
ಚಿತ್ರ: 14ಎಚ್‌ಎಸ್‌ಎನ್3: ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಟರಿ ಬೆಂಗಳೂರು ದಕ್ಷಿಣ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು.