ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಸೋಮವಾರ ಸನ್ಮಾನಿಸಲಾಯಿತು. ನಾಗೇಂದ್ರ ರಾಯ, ಬಿ.ಕೆ.ಸತೀಶ್, ಬಿ.ಎಸ್.ರವಿಕುಮಾರ್, ಗುಣವತಿ, ರವಿಕುಮಾರ, ಲೋಕೇಶ್, ನಾಗೇಶ್, ಪ್ರಕಾಶ್, ಮಂಗಳ, ಪುಟ್ಟರಾಜು, ಚೇತನಾ ಹಾಗೂ ವಿದ್ಯಾರ್ಥಿಗಳು ಇದ್ದರು.  
ಹಾಸನ

ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನದ ನೆರವು

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ನಾಗೇಂದ್ರ ರಾಯ ಅಭಿಪ್ರಾಯ
ಶ್ರವಣಬೆಳಗೊಳ: ಎನ್‌ಎಂಎಂಎಸ್ ವಿದ್ಯಾರ್ಥಿವೇತನ ಯೋಜನೆಯಿಂದ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮುಂದುವರಿಸಲು ನೆರವಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ನಾಗೇಂದ್ರ ರಾಯ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2025-26 ನೇ ಸಾಲಿನ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದರಿಂದ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ವೆಚ್ಚದ ಭಾರ ಕಡಿಮೆಯಾಗಿ ತಮ್ಮ ಅಧ್ಯಯನದ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ ಎಂದರು.
ಎನ್‌ಎಂಎಂಎಸ್ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವುದರ ಜತೆಗೆ ಶೈಕ್ಷಣಿಕ ಸಾಧನೆಗೆ ಪ್ರೇರಣೆ ನೀಡುತ್ತದೆ. ಆರ್ಥಿಕ ಸಮಸ್ಯೆಗಳ ಕಾರಣದಿಂದ ಶಿಕ್ಷಣವನ್ನು ಅರ್ಧದಲ್ಲೇ ಬಿಡುವ ಪರಿಸ್ಥಿತಿಯನ್ನು ತಡೆಯುತ್ತದೆ. ಹಲವು ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ನೆರವಿನಿಂದ ಉತ್ತಮ ಶಿಕ್ಷಣ ಪಡೆದು ಉನ್ನತ ಗುರಿಗಳನ್ನು ಸಾಧಿಸುತ್ತಿದ್ದಾರೆ. ಈ ಯೋಜನೆಯು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಕನಸುಗಳಿಗೆ ಬಲ ತುಂಬುವ ಪರಿಣಾಮಕಾರಿ ಯೋಜನೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕ ಬಿ.ಕೆ.ಸತೀಶ್ ಮಾತನಾಡಿ, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ಪಬ್ಲಿಕ್ ಶಾಲೆಯು (ಕೆಪಿಎಸ್) ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಕೆಪಿಎಸ್ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಸಕ್ತ ವರ್ಷದಿಂದ ಶ್ರವಣಬೆಳಗೊಳದಲ್ಲೂ ಕೆಪಿಎಸ್ ಪ್ರಾರಂಭಿಸಿರುವುದರಿಂದ ಸ್ಥಳಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ವಿದ್ಯಾರ್ಥಿ ವೇತನಕ್ಕೆ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಅಂಕಿತಾ, ಡಿ.ಎಸ್.ಬಿಂದುಶ್ರೀ, ಶ್ರೇಯಾ ಹಾಗೂ ಎಸ್.ಎಂ.ಪ್ರಜ್ವಲ್ ಆಯ್ಕೆಯಾಗಿದ್ದು, ಚನ್ನರಾಯಪಟ್ಟಣ ತಾಲೂಕಿನ ವಿವಿಧ ಶಾಲೆಗಳ ಒಟ್ಟು 20 ವಿದ್ಯಾರ್ಥಿಗಳ ಪೈಕಿ ನಮ್ಮ ಶಾಲೆಯಿಂದಲೇ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಪರಿಕ್ಷೆಗೆ ತರಭೇತಿ ನೀಡಿದ ಶಿಕ್ಷಕರಾದ ಬಿ.ಎಸ್.ರವಿಕುಮಾರ್ ಹಾಗೂ ಗುಣವತಿ ಸಂತಸ ವ್ಯಕ್ತಪಡಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ, ಉಪನ್ಯಾಸಕ ಲೋಕೇಶ್, ಅಂಬಿಕಾ ಶಾಲೆ ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕರಾದ ಪ್ರಕಾಶ್, ಮಂಗಳ, ಪುಟ್ಟರಾಜು, ಚೇತನಾ ಇದ್ದರು.