ಅರಕಲಗೂಡು ತಾಲೂಕಿನ ಅಬ್ಬೂರು ಮಾಚಗೌಡನಹಳ್ಳಿ ಗ್ರಾಮಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಲತಾಕುಮಾರಿ ಭೇಟಿ ನೀಡಿ ನೀಡಿ ಗ್ರಾಮಸ್ಥರ ಕುಂದುಕೊರತೆ ಆಲಿಸಿದರು.
- ಜಿಲ್ಲಾಧಿಕಾರಿಗೆ ಅಬ್ಬೂರು ಮಾಚಗೌಡನಹಳ್ಳಿ ಗ್ರಾಮಸ್ಥರ ಮನವಿ
- ಕುಂದುಕೊರತೆ ಆಲಿಸಿದ ಡಿಸಿ ಲತಾಕುಮಾರಿ
ಅರಕಲಗೂಡು: ತಾಲೂಕಿನ ಅಬ್ಬೂರು ಮಾಚಗೌಡನಹಳ್ಳಿ ಗ್ರಾಮಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಲತಾಕುಮಾರಿ ಭೇಟಿ ನೀಡಿ ಗ್ರಾಮಸ್ಥರ ಕುಂದುಕೊರತೆ ಆಲಿಸಿದರು.
ಗ್ರಾಮದ ಗೋಮಾಳದಲ್ಲಿ ಕೆಲವರು ಹಕ್ಕುಪತ್ರ ಪಡೆದಿದ್ದಾರೆ. ಹಕ್ಕುಪತ್ರ ಹೊಂದಿರುವ ಗ್ರಾಮಸ್ಥರು ಶೆಡ್ ನಿರ್ಮಿಸಿಕೊಂಡಿದ್ದು, ಇದೀಗ ತೆರವುಗೊಳಿಸಲಾಗಿದೆ. ತಹಸೀಲ್ದಾರ್ ಅವರು ನೋಟಿಸ್ ನೀಡದೆ ಜೆಸಿಬಿ ಮೂಲಕ ಶೆಡ್‌ಗಳನ್ನು ನೆಲಸಮಗೊಳಿಸಿ ನಮ್ಮನ್ನು ಒಕ್ಕಲೆಬ್ಬಿಸಿದ್ದರಿಂದ ಬದುಕು ಬೀದಿಗೆ ಬಿದ್ದಿದೆ. ಮನೆ ಕಟ್ಟಿಕೊಳ್ಳಲು ಇಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಅಳಲು ತೋಡಿಕೊಂಡರು.
ಇದಕ್ಕೆ ಊರಿನ ಕೆಲವರು ವಿರೋಧ ವ್ಯಕ್ತಪಡಿಸಿದರು. ಈಗಾಗಲೇ ಗೋಮಾಳದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದು ಬಗರ್‌ಹುಕುಂನಲ್ಲಿ ಭೂಮಿ ಸಾಗುವಳಿ ಮಾಡುತ್ತಿದ್ದಾರೆ. ಇನ್ನುಳಿದ 2 ಎಕರೆ ಜಾಗ ಊರಿನ ಅಭಿವೃದ್ಧಿ ಕಾರ್ಯಗಳಿಗೆ ಉಳಿಸಿಕೊಳ್ಳಬೇಕಾಗಿದೆ. ಈ ಗೋಮಾಳ ಜಾಗದಲ್ಲಿ ಕೆಲವರು ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡಿದ್ದು ತಾಲೂಕು ಆಡಳಿತ ತೆರವುಗೊಳಿಸಿದೆ. ಈ ಜಾಗವನ್ನು ಊರಿನ ಅಭಿವೃದ್ಧಿ ಕೆಲಸಗಳಿಗೆ ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ಹಕ್ಕುಪತ್ರ ಹೊಂದಿರುವ ಕುರಿತು ದಾಖಲೆಗಳನ್ನು ಪರಿಶೀಲಿಸಿ ಸ್ವಂತ ಸೂರು ಇಲ್ಲದ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಊರಿನಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ತಹಸೀಲ್ದಾರ್ ಕೆ.ಸಿ.ಸೌಮ್ಯಾ, ಸಕಲೇಶಪುರ ಉಪವಿಭಾಗಾಧಿಕಾರಿ ಹುಲ್ಲುಮನೆ ತಿಮ್ಮಣ್ಣ, ರಾಜಸ್ವ ನಿರೀಕ್ಷಕ ವಸಂತ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.