ದೋಣಿಗಲ್ ಸಮೀಪ ನಡೆಯುತ್ತಿರುವ ರಸ್ತೆ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಕಲೇಶಪುರ: ಕಂದಲಿಯಿಂದ ಹೆಗ್ಗದ್ದೆವರೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯಿಂದ ದೋಣಿಗಳ ಸಮೀಪ ವ್ಯಾಪಕ ಹಾನಿ ಉಂಟಾಗಿದ್ದು, ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದೇ ಯಾವುದೇ ಕಾಮಗಾರಿ ನಡೆಸಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ರೈತರು ಬುಧವಾರ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಐದು ವರ್ಷಗಳ ಹಿಂದೆ ಆರಂಭವಾದ ರಸ್ತೆ ಕಾಮಗಾರಿಯ ವೇಳೆ ಮಳೆಗಾಲದ ನೀರು ಸರಾಗವಾಗಿ ಹರಿಯಲು ಅಗತ್ಯವಾದ ಚರಂಡಿ, ಕಲ್ವರ್ಟ್ ಹಾಗೂ ನೀರು ಹರಿವಿನ ವ್ಯವಸ್ಥೆಗಳನ್ನು ಸಮರ್ಪಕವಾಗಿ ರೂಪಿಸದೆ ಸುಮಾರು 120 ಅಡಿಗೂ ಹೆಚ್ಚು ಎತ್ತರದಲ್ಲಿ ಮಣ್ಣು ತುಂಬಲಾಗಿದೆ. ಇದರ ಪರಿಣಾಮ ಮಳೆಗಾಲದಲ್ಲಿ ನೀರು ಹಾಗೂ ಮಣ್ಣು ಕೃಷಿ ಭೂಮಿಗಳಿಗೆ ಹರಿದು ಸುಮಾರು 20 ಎಕರೆಗೂ ಅಧಿಕ ಕಾಫಿ, ಅಡಕೆ ಹಾಗೂ ಇತರ ಬೆಳೆಗಳ ತೋಟಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಮುಂದಿನ 30ರಿಂದ 35 ವರ್ಷಗಳವರೆಗೆ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸಂತ್ರಸ್ತರು ಈ ಬಗ್ಗೆ ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ಅಲ್ಲದೆ, ಮೂಲ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಪ್ರಕಾರ ಕಾಮಗಾರಿ ನಡೆಸದೇ ಅದರ ಸ್ವರೂಪವನ್ನು ಬದಲಾಯಿಸಿ ಬಲವಂತವಾಗಿ ಕಾಮಗಾರಿ ಮುಂದುವರಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಹಾನಿಗೊಳಗಾದ ಭೂಮಿ ಹಾಗೂ ಬೆಳೆಗಳಿಗೆ ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಿ ಪರಿಹಾರ ನಿಗದಿಪಡಿಸಬೇಕು, ಅಲ್ಲಿಯವರೆಗೂ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತೆ ಪ್ರಿಯಾಂಕಾ ಮಾತನಾಡಿ, ನಾವು ನಾಲ್ಕು ದಶಕಗಳಿಂದ ಬೆಳೆಸಿಕೊಂಡು ಬಂದ ಕಾಫಿ ತೋಟಗಳು ಸಂಪೂರ್ಣವಾಗಿ ಹಾಳಾಗಿವೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಇಲ್ಲ. ಪ್ರಶ್ನೆ ಮಾಡಿದವರ ಮೇಲೆಯೇ ದೂರು ದಾಖಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಹಾಗೂ ಡಿವೈಎಸ್ಪಿ ಮಾಲತೇಶ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಸಂತ್ರಸ್ತರ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಈ ತಿಂಗಳ 12ರಂದು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂತ್ರಸ್ತರೊಂದಿಗೆ ತ್ರಿಪಕ್ಷೀಯ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂಬ ಭರವಸೆಯ ಮೇಲೆ ಗ್ರಾಮಸ್ಥರು ಹಾಗೂ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹಾಗೂ ಪರಿಹಾರ ಘೋಷಣೆಯಾಗದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಗ್ರಾಮಸ್ಥರು ತಿಳಿಸಿದರು.