ಸಕಲೇಶಪುರ ಗ್ರಾಮಾಂತರ ಠಾಣೆ ಮುಂದೆ ಜಮಾಯಿಸಿರುವ ಫೋಟೋಗ್ರಾಫರ್ಸ್‌ ಹಾಗೂ ಸ್ಥಳೀಯರು. 
ಹಾಸನ

ಫೋಟೋ ಶೂಟ್‌ಗೆ ಬಂದಿದ್ದ ಫೋಟೋಗ್ರಾಫರ್ಸ್‌ ಮೇಲೆ ಹಲ್ಲೆ

ಸಕಲೇಶಪುರ: ತಾಲೂಕಿನ ಮರಗುಂದ ಗ್ರಾಮದ ಬೆಟ್ಟದ ಭೈರವೇಶ್ವರ ದೇವಾಲಯದ ಅವರಣದಲ್ಲಿ ಶುಕ್ರವಾರ ಫೋಟೋಗ್ರಾಫರ್ಸ್‌ ಹಾಗೂ ಸ್ಥಳೀಯರ ನಡುವೆ ಆರಂಭವಾದ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪ್ರೀ ವೆಡ್ಡಿಂಗ್ ಶೋಟಿಂಗ್‌ಗಾಗಿ ಬಂದಿದ್ದ ಫೋಟೋಗ್ರಾಫರ್‌ಗಳ ತಂಡಕ್ಕೆ ಸ್ಥಳೀಯರು ದೇವಾಲಯದ ಅವರಣದಲ್ಲಿ ಚಪ್ಪಲಿ ಧರಿಸಿ ಬಂದಿರುವುದನ್ನು ಪ್ರಶ್ನಿಸಿದ್ದಲ್ಲದೆ, ಚಡ್ಡಿ ಹಾಕಿ ಬಂದು ಮನಬಂದಂತೆ ಚಿತ್ರೀಕರಣ ನಡೆಸುವ ಮೂಲಕ ದೇವಸ್ಥಾನದ ಪಾವಿತ್ರೃತೆಗೆ ಧಕ್ಕೆ ತರಲಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ಫೋಟೋಗ್ರಾಫರ್‌ಗಳು ಮಾತಿನ ಚಕಮಕಿ ನಡೆಸಿದರು. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಸ್ಥಳಕ್ಕೆ ಮತ್ತಷ್ಟು ಸ್ಥಳೀಯರನ್ನು ಕರೆಸಿಕೊಂಡು ಫೋಟೋಗ್ರಾಫರ್‌ಗಳ ವರ್ತನೆಯನ್ನು ಖಂಡಿಸಿದರು.
ಈ ವೇಳೆ ಎರಡು ತಂಡದ ನಡುವೆ ವಾಗ್ವಾದ ತಾರಕಕ್ಕೇರಿ ಸ್ಥಳೀಯರು ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ ನಡೆಸಿದರು. ಹಲ್ಲೆಯಲ್ಲಿ ಮೂವರು ಫೋಟೋಗ್ರಾಫರ್‌ಗಳು ಗಾಯಗೊಂಡಿದ್ದಾರೆ.
ಠಾಣೆ ಮುಂದೆ ಹೈಡ್ರಾಮಾ: ಘಟನೆ ವಿಚಾರ ತಿಳಿದ ಹಾಸನ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಫೋಟೋಗ್ರಾಫರ್‌ಗಳ ತಂಡದ ಸದಸ್ಯರು ನೂರಾರು ಸಂಖ್ಯೆಯಲ್ಲಿ ಗ್ರಾಮಾಂತರ ಠಾಣೆ ಮುಂದೆ ಜಮಾಯಿಸಿ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ಈ ವೇಳೆ ಹಲ್ಲೆ ನಡೆಸಿದ ಸ್ಥಳೀಯರನ್ನು ಬೆಂಬಲಿಸಿ ಸುತ್ತಲಿನ ಹತ್ತಾರು ಗ್ರಾಮಸ್ಥರು ಠಾಣೆ ಮುಂಭಾಗ ಆಗಮಿಸಿದ್ದರು. ಸ್ಥಳೀಯರು ರಾಜಿ ಸಂಧಾನದ ಮೂಲಕ ಪ್ರಕರಣಕ್ಕೆ ಇತ್ಯರ್ಥಕ್ಕೆ ಪ್ರಯತ್ನಿಸಿದರು. ಆದರೆ, ರಾಜಿ ಸಂಧಾನಕ್ಕೆ ಒಪ್ಪದ ಫೋಟೋಗ್ರಾಫರ್ಸ್‌ ತಂಡ ದೂರು ದಾಖಲಿಸಿ ಹಲ್ಲೆ ನಡೆಸಿದವರನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಠಾಣೆಯ ಸಮೀಪವೇ ಇದ್ದ ಹಲ್ಲೆ ನಡೆಸಿದ ವ್ಯಕ್ತಿಗಳ ಮೇಲೆ ಫೋಟೋಗ್ರಾಫರ್ಸ್‌ ತಂಡ ಹಲ್ಲೆಗೆ ಮುಂದಾಯಿತು. ಈ ವೇಳೆ ಸ್ಥಳೀಯರ ಬೆಂಬಲಕ್ಕೆ ಹಲವರು ಧಾವಿಸಿದ್ದರಿಂದ ಠಾಣೆಯ ಮುಂಭಾಗ ಪೊಲೀಸರ ಎದುರೇ ಮತ್ತೆ ಮಾರಾಮಾರಿ ನಡೆದು ಉದ್ವಿಗ್ನ ಸ್ಥಿತಿ ತಲೆದೋರಿತು.
ಪೊಲೀಸರು ಲಾಠಿ ಬೀಸಿ ಎರಡು ಗುಂಪುಗಳನ್ನು ಚದುರಿಸಿದರು. ಗ್ರಾಮಸ್ಥರಾದ ಅಭಿ, ಪ್ರಶಾಂತ್, ರಕ್ಷ, ಅರವಿಂದ್, ಉಚ್ಚಿತ್, ಪ್ರಜ್ವಲ್, ನಿಶಾಂತ್ ಸೇರಿದಂತೆ 8 ಜನರ ಮೇಲೆ ದೂರು ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು ಫೋಟೋಗ್ರಾಫರ್‌ಗಳಾದ ನವೀನ್, ಚೇತನ್ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ.