ಸಕಲೇಶಪುರದ ಪುರಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ದೌರ್ಜನ್ಯ ಅರಿವು ಕಾರ್ಯಕ್ರಮದಲ್ಲಿ ಸಿಸ್ಟರ್ ಲಿನೆಟ್ ಮಾತನಾಡಿದರು. ದೇವಿಕಾ ಶೆಟ್ಟಿ,ಡಾ.ಸಾವಿತ್ರಿ, ಡಾ.ರಂಗಲಕ್ಷ್ಮೀ, ಡಾ.ಶೈಲಜಾಕುಮಾರಿ ಇತರರಿದ್ದರು. 
ಹಾಸನ

ದೌರ್ಜನ್ಯ ವಿರುದ್ಧ ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಳ್ಳಿ

ಸಕಲೇಶಪುರ: ಸಮಾಜದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಹಾಗೂ ಪ್ರೀತಿ, ಸಹಕಾರ ಮತ್ತು ಸಮಾನತೆ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಎಲ್ಲರೂ ಒಗ್ಗೂಡಿ ಸತ್ಯದ ಪರವಾಗಿ ಕಾರ್ಯನಿರ್ವಹಿಸಬೇಕೆಂದು ಗುಲ್ಬರ್ಗಾ ವಿವಿ ಪ್ರಾಧ್ಯಾಪಕಿ ಸಿಸ್ಟರ್ ಲಿನೆಟ್ ಸಲಹೆ ನೀಡಿದರು.
ಪಟ್ಟಣದ ಪುರಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ದ್ವೇಷ, ಅಸೂಯೆ, ಕ್ರೋಧ, ಲಿಂಗ ತಾರತಮ್ಯ ಮತ್ತು ಅಪ್ರಾಪ್ತ ವಯಸ್ಸಿನ ಮದುವೆಗಳಂತಹ ಸಮಸ್ಯೆಗಳು ಮಹಿಳೆಯರ ಮೇಲಿನ ಹಿಂಸೆಗೆ ಕಾರಣವಾಗುತ್ತಿದ್ದು, ಇಂತಹ ಘಟನೆಗಳ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದರು.
ದೌರ್ಜನ್ಯ ಕಂಡು ಮೌನವಾಗಿರದೆ, ಪ್ರತಿಯೊಬ್ಬರೂ ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಚಾಲಕಿ ದೇವಿಕಾ ಶೆಟ್ಟಿ ಮಾತನಾಡಿ, ಮಹಿಳೆಯರ ರಕ್ಷಣೆಗೆ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದರೂ ಅವುಗಳ ಬಗ್ಗೆ ಅರಿವು ಹಾಗೂ ಬಳಕೆ ಕಡಿಮೆ ಇರುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಮಹಿಳಾ ಸಹಾಯವಾಣಿ 1091 ಸೇರಿದಂತೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005 ಮುಂತಾದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ಲಿಂಗ ತಾರತಮ್ಯ ನಿರ್ಮೂಲನೆಯಾಗಿದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಸಂಜೆ 6 ಗಂಟೆಗೆ ಆರಂಭವಾದ ಮೆರವಣಿಗೆ ತರಕಾರಿ ಮಾರುಕಟ್ಟೆ ತಿರುವಿನಿಂದ ಬಿ.ಎಂ.ರಸ್ತೆ ಮೂಲಕ ಹಳೇ ಬಸ್ ನಿಲ್ದಾಣದವರೆಗೆ ಸಾಗಿತು. ಮುಖಂಡರಾದ ಡಾ.ಸಾವಿತ್ರಿ, ಡಾ.ರಂಗಲಕ್ಷ್ಮೀ, ಡಾ.ಶೈಲಜಾಕುಮಾರಿ, ಸಿಸ್ಟರ್ ಲಿನೆಟ್, ಆರತಿ, ಶಾನು ಸುಹಾನ, ಸೌಮ್ಯಾ, ಸಿಐಟಿಯು ಮುಖಂಡ ಧರ್ಮೇಶ್, ಮಂಜುನಾಥ್ ಯಡೆಹಳ್ಳಿ, ಸಾಮಾಜಿಕ ಕಾರ್ಯಕರ್ತ ಪೃಥ್ವಿ, ಶ್ವೇತಾ ಮಂಜುನಾಥ್, ಮೀನಾಕ್ಷಿ ಖಾದರ್, ವಕೀಲೆ ಕಲ್ಪನಾ, ಕೀರ್ತಿ ಮತ್ತಿತರರು ಭಾಗವಹಿಸಿದ್ದರು.