ಪ್ರತಿಭಟನೆ 
ಹಾಸನ

ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಸಕಲೇಶಪುರ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ತಾಲೂಕಿನ ಭಾಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಚಿನ್ನಸ್ವಾಮಿ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಗುರುವಾರ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರವೇ ತಾಲೂಕು ಅಧ್ಯಕ್ಷ ಗಗನ್ ಹಾಡ್ಲಳ್ಳಿ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟಾಚಾರದ ದಾಖಲೆಗಳನ್ನು ನೀಡಿದರೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಕಾರ್ಯನಿರ್ವಹಣಾಧಿಕಾರಿ (ಇಒ) ಗಂಗಾಧರ್ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಿಡಿಒ ಅವರನ್ನು ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿ, ಪ್ರತಿಭಟನೆಯನ್ನು ಕೈಬಿಡುವಂತೆ ಕೋರಿದರು.
ಆದರೆ, ಇಒ ಅವರ ಈ ಮಾತಿಗೆ ಒಪ್ಪದ ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೇವಲ ವರ್ಗಾವಣೆ ಮಾಡುವುದರಿಂದ ನ್ಯಾಯ ಸಿಗುವುದಿಲ್ಲ. ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವ ಆರೋಪ ಸಾಬೀತಾಗಿದ್ದರೂ ಕೇವಲ ವರ್ಗಾವಣೆ ಮಾಡುವುದು ಸರಿಯಲ್ಲ. ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಪಟ್ಟು ಹಿಡಿದರು. ಅಮಾನತು ಆದೇಶ ಹೊರ ಬೀಳುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಗಗನ್ ಹಾಡ್ಲಳ್ಳಿ ಮಾತನಾಡಿ, 15ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದಿರುವ ಹಗರಣದ ಬಗ್ಗೆ ಸ್ಪಷ್ಟ ದಾಖಲೆಗಳಿದ್ದರೂ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ವರ್ಗಾವಣೆ ಶಿಕ್ಷೆಯಲ್ಲ, ಅದು ಕೇವಲ ಸ್ಥಳ ಬದಲಾವಣೆ ಮಾತ್ರ. ಭ್ರಷ್ಟ ಅಧಿಕಾರಿಯನ್ನು ಅಮಾನತುಗೊಳಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಹಾಸನ ಜಿಲ್ಲಾ ಕಾರ್ಯದರ್ಶಿ ಮತ್ತು ಉಸ್ತುವಾರಿ ರಘು ಪಾಳ್ಯ ಮಾತನಾಡಿ, 15ನೇ ಹಣಕಾಸು ಆಯೋಗದ ಅನುದಾನ, ವರ್ಗ-1 ಹಾಗೂ ವರ್ಗ-2 ಖಾತೆಗಳ ನಿಧಿಗಳು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಹಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಈ ಸಂಬಂಧ ಇಲಾಖಾ ವಿಚಾರಣೆ ನಡೆಸುವಂತೆ ಈಗಾಗಲೇ ಆದೇಶಗಳಿದ್ದರೂ ತನಿಖೆ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಹಾಗೂ ಜವಾಬ್ದಾರಿತನದ ಕೊರತೆ ತೋರಿರುವುದು ಜನಾಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಿ, ಪಾರದರ್ಶಕ, ನ್ಯಾಯಸಮ್ಮತ ತನಿಖೆ ನಡೆಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಕುಮಾರ್, ರೈತ ಘಟಕದ ವಸಂತ ಬೊಮ್ಮನಕೆರೆ, ಕಾರ್ಮಿಕ ಘಟಕದ ಸಂಗ್ರಾಮ್, ಸುನಿಲ್, ಮಂಜುನಾಥ್, ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.