ಹೊಳೆನರಸೀಪುರ ಪಟ್ಟಣದಲ್ಲಿ ಜಾನಕಿ ಅಮ್ಮ ಅವರ ಸ್ಮರಣಾರ್ಥ ತೀರದ ಯಾನ ಜಾನಕಿ ಗಾನ ಗೀತ ನಮನ ಕಾರ್ಯಕ್ರಮದಲ್ಲಿ ಜಾನಕಿ ಅಮ್ಮ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ದೀಪಾ ಬಾಲಾಜಿ, ಜಯಪ್ರಕಾಶ್, ಕೆ.ಎಂ.ನಾಗರಾಜು, ಡಿ.ಕೆ.ವಸಂತಯ್ಯ ಮತ್ತಿತರರಿದ್ದರು.
- ವಾಸವಿ ಕ್ಲಬ್ ಅಧ್ಯಕ್ಷೆ ದೀಪಾ ಬಾಲಾಜಿ ಬಣ್ಣನೆ
ಹೊಳೆನರಸಿಪುರ: ಮಕ್ಕಳಿಂದ ವಯೋವೃದ್ಧರವರೆಗೂ ಎಲ್ಲ ತರದ ಶೈಲಿಯ ಗೀತೆಗಳನ್ನು ಆರು ದಶಕಗಳಿಗೂ ಹೆಚ್ಚು ಕಾಲ ಹಾಡುತ್ತಾ ದಕ್ಷಿಣ ಭಾರತೀಯರನ್ನು ರಂಜಿಸಿದ ಗಾಯನ ಲೋಕದ ದೈತ್ಯ ಪ್ರತಿಭೆ ಎಸ್.ಜಾನಕಿ ಅಮ್ಮ ಅವರ ಸಾಧನೆ ವಿಶ್ವ ದಾಖಲೆಯೇ ಸರಿ ಎಂದು ವಾಸವಿ ಕ್ಲಬ್ ಅಧ್ಯಕ್ಷೆ ದೀಪಾ ಬಾಲಾಜಿ ಬಣ್ಣಿಸಿದರು.
ಪಟ್ಟಣದ ಪುರಸಭಾ ಮುಂಭಾಗದ ವೇದಿಕೆಯಲ್ಲಿ ಶುಕ್ರವಾರ ಎಸ್.ಜಾನಕಿ ಅಮ್ಮ ಅವರ ಅಭಿಮಾನಿಗಳು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ದಕ್ಷಿಣ ಭಾರತದ ಗಾನಕೋಗಿಲೆ ಜಾನಕಿ ಅಮ್ಮ ಅವರ ಸ್ಮರಣಾರ್ಥ ‘ತೀರದ ಯಾನ ಜಾನಕಿ ಗಾನ ಗೀತ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನಕಿ ಅಮ್ಮ ಅವರು ಕನ್ನಡ ನಾಡಿನ ಮೇಲೆ ಅಪಾರ ಪ್ರೀತಿ ವಿಶ್ವಾಸ ಹೊಂದಿದ್ದರು ಎಂದರು.
ಪ್ರಗತಿಪರ ಯುವ ಮುಖಂಡ ಸುಪ್ರೀತ್ ಪಾಸ್ವಾನ್ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪುರುಷ ಗಾಯಕರಿಗೆ ಮಾತ್ರ ನೀಡಲಾಗುತ್ತಿತ್ತು. ಈ ಲಿಂಗ ತಾರತಮ್ಯ ಧೋರಣೆಯನ್ನು ಕಟುವಾಗಿ ಖಂಡಿಸಿದ ಎಸ್.ಜಾನಕಿ ಅವರು, ನೈಜ ಪ್ರತಿಭೆಗಳಲ್ಲಿ ಮಹಿಳಾ ಗಾಯಕಿಯರಿಗೂ ಪ್ರಶಸ್ತಿಗಳಲ್ಲಿ ಅವಕಾಶ ಕಲ್ಪಿಸುವಂತೆ ಪ್ರಥಮವಾಗಿ ದನಿ ಎತ್ತಿದರು. ಆಡು ಮುಟ್ಟದ ಸೊಪ್ಪಿಲ್ಲ, ಜಾನಕಿ ಹಾಡದ ಗಾನ ಪ್ರಕಾರಗಳಿಲ್ಲ. ಇಂದು ಅವರು ನಮ್ಮಿಂದ ದೂರವಾಗಿರುವುದು ಕಲಾಕ್ಷೇತ್ರಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ ಎಂದರು.
ಉದ್ಯಮಿ ಜಯಪ್ರಕಾಶ್ ಮಾತನಾಡಿ, ಜಾನಕಿ ಅಮ್ಮ ಅವರು ಸರಳತೆ ಮುಗ್ಧತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಅವರ ಕೊನೆಯ ದಿನಗಳನ್ನು ನಮ್ಮ ಕನ್ನಡ ಮಣ್ಣಿನ ಮೈಸೂರಿನಲ್ಲಿ ಕಳೆದು ಮೈಸೂರಿನ ಮಣ್ಣಲ್ಲಿ ಮಣ್ಣಾಗಿದ್ದು ನಮ್ಮೆಲ್ಲರ ಪುಣ್ಯ. ಇಂಥ ಪ್ರತಿಭಾವಂತ ಕಲಾವಿದರಿಗೆ ಗೌರವ ಸಲ್ಲಿಸುವುದು ನಾಗರಿಕರ ಜವಾಬ್ದಾರಿಯೂ ಹೌದು ಎಂದರು.
ಯಂಗ್ ಡೈಮಂಡ್ಸ್ ಮ್ಯೂಸಿಕಲ್ ಬೀಟ್ಸ್ ಆರ್ಕೆಸ್ಟ್ರಾ ತಂಡದ ಕೆ.ಎಂ.ನಾಗರಾಜು ಮಾತನಾಡಿ, ಗಾನಲೋಕದ ದೈತ್ಯ ಪ್ರತಿಭೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಎಸ್.ಜಾನಕಿ ಅಮ್ಮ ಅವರಿಗೆ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಡಿ.ಕೆ.ವಸಂತಯ್ಯ ಮಾತನಾಡಿ, ನಾನು ಚಿಕ್ಕಂದಿನಿಂದಲೂ ಜಾನಕಮ್ಮ ಅವರ ಕಟ್ಟಾ ಅಭಿಮಾನಿ ನಮ್ಮ ತಂದೆಯಾದಿಯಾಗಿ ನನ್ನ ಮತ್ತು ನನ್ನ ಮುಂದಿನ ತಲೆಮಾರು ಜಾನಕಿ ಅವರ ಗೀತೆಯನ್ನು ಕೇಳಿಕೊಂಡೇ ಬಂದಿದ್ದೇವೆ. ಸೂರ್ಯ- ಚಂದ್ರ ಇರುವವರೆಗೂ ಅಮ್ಮನವರ ಶಾರೀರ ಎಲ್ಲರ ಮನೆ ಮನೆಗಳಲ್ಲಿ ಸಂಗೀತ ಸಾಹಿತ್ಯ ಕಲಾಭಿಮಾನಿಗಳಲ್ಲಿ ಜೀವಂತವಾಗಿರುತ್ತದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಕಿರುತೆರೆ ನಟ ಎಚ್.ವಿ.ಸುರೇಶ್‌ಕುಮಾರ್, ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಉಪನ್ಯಾಸಕ ಪ್ರಭುಶಂಕರ್ ಮಾತನಾಡಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಸೋಮಶೇಖರ್, ಎಲೆಕ್ಟ್ರಾನಿಕ್ ಉಪಕರಣಗಳ ಸಂಘದ ಮುರಳೀಧರ ಗುಪ್ತ ಹಾಗೂ ಗಣ್ಯರು ಎಸ್.ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿಸಿ ಸಂತಾಪ ಸೂಚಿಸಿದರು.
ಯಂಗ್ ಡೈಮಂಡ್ಸ್ ಮ್ಯೂಸಿಕಲ್ ಬೀಟ್ಸ್ ಆರ್ಕೆಸ್ಟ್ರಾ ತಂಡದ ಕಲಾವಿದರಾದ ಕೆ.ಎಂ.ಮಹೇಶ, ಕೆ.ಎಂ.ಕುಮಾರ, ಎಂ.ರಾಘವೇಂದ್ರ, ಕೆ.ಎಂ.ಕೃಷ್ಣಮೂರ್ತಿ, ವಿದ್ಯಾ ಧನುಷ್ ಹಾಗೂ ಅಮೋಘ ಮೆಲೋಡಿಸ್‌ನ ಅಜಿತ್ ಕುಮಾರ್ ಅವರು ಎಸ್.ಜಾನಕಿ ಅವರ ಚಿತ್ರಗೀತೆಗಳನ್ನು ಹಾಡುವ ಮೂಲಕ ಗೀತ ನಮನ ಶ್ರದ್ಧಾಂಜಲಿ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಮಾದರ ಮಹಾಸಭಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಸಿ.ಎನ್.ಚಂದ್ರು ಉಪಸ್ಥಿತರಿದ್ದರು.