ಅರಕಲಗೂಡು ತಾಲೂಕಿನ ಕೊಡಕಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಎ. ಮಂಜು, ಸಾ.ರಾ. ಮಹೇಶ್, ಸೂರಜ್ ರೇವಣ್ಣ ಇತರರಿದ್ದರು. 
ಹಾಸನ

ಜೆಡಿಎಸ್ ಉಳಿವಿಗಾಗಿ ಆರೋಗ್ಯ ಲೆಕ್ಕಿಸದೆ ಓಡಾಟ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ
ಅರಕಲಗೂಡು: ರಾಜ್ಯಕ್ಕೆ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಟ್ಟಿದ ಜೆಡಿಎಸ್ ಪಕ್ಷದ ಉಳಿವಿಗಾಗಿ ನನ್ನ ಆರೋಗ್ಯವನ್ನು ಲೆಕ್ಕಿಸದೆ ಓಡಾಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ತಾಲೂಕಿನ ಕೊಡಕಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ, ಶ್ರೀ ಮಾರಮ್ಮ ಮತ್ತು ಗ್ರಾಮದೇವತೆ ದೇವಸ್ಥಾನಗಳ ಲೋಕಾರ್ಪಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಐದನೇ ಬಾರಿ ಬದುಕಿ ಬಂದಿದ್ದು, ಪಕ್ಷಕ್ಕಾಗಿ ವಿರಮಿಸದೆ ಓಡಾಡುತ್ತಿದ್ದೇನೆ. ನೀವೇ ಬೆಳೆಸಿದ ದೇವೇಗೌಡರಿಗೆ ಹೆಚ್ಚು ಕಾಲ ಅಧಿಕಾರ ಸಿಗಲಿಲ್ಲ. ಚುನಾವಣೆ ಬಂದಾಗ ಯಾರನ್ನು ಗೆಲ್ಲಿಸಬೇಕು ಎಂಬುದು ಜಿಲ್ಲೆಯ ಮತದಾರರಿಗೆ ಗೊತ್ತಿದೆ. ಈ ಕ್ಷೇತ್ರದಲ್ಲಿ ಮತ್ತೆ ಎ. ಮಂಜು ಅವರನ್ನು ಆಶೀರ್ವದಿಸಿ ಎಂದರು.
ರಾಜ್ಯ ಸರ್ಕಾರ ಅಭಿವೃದ್ಧಿ ನಿರ್ಲಕ್ಷ್ಯಿಸಿದೆ. ಉದ್ಯೋಗ ಸಮಸ್ಯೆ ಎದುರಾಗಿದೆ. ಯುವಕರು ಧಾರವಾಡದಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಮಾಡಿದ್ದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ 76 ಸಾವಿರ ಶಿಕ್ಷಕರ ನೇಮಕಾತಿ ಮಾಡಿಲ್ಲ. ಮೂರು ವರ್ಷದಿಂದ ಈ ಸರ್ಕಾರ ಒಂದೂ ಪ್ರಗತಿ ಕೆಲಸ ಕೊಡಲಿಲ್ಲ, ಯುವಕರು ನಮ್ಮ ಮನೆ ಬಾಗಿಲಿಗೆ ಬಂದಾಗ ತುಂಬ ಮನಸ್ಸಿಗೆ ನೋವಾಗುತ್ತದೆ. ನೀವು ಇಡೀ ಸರ್ಕಾರದ ಖಜಾನೆ ತುಂಬಿಸುತ್ತಿದ್ದೀರಿ, ಆದರೆ ಸರ್ಕಾರ ಬೇರೆಯದ್ದಕ್ಕೆ ಖರ್ಚು ಮಾಡುತ್ತಿದೆ. ಹಣದ ದುಂದುಗಾರಿಕೆ, ಲೂಟಿ ಆಗುತ್ತಿದೆ. ಸರ್ಕಾರದಲ್ಲಿ ವರ್ಗಾವಣೆ ದಂಧೆ, ಅಕ್ರಮಗಳು ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಐದು ಗ್ಯಾರಂಟಿಗಳನ್ನು ನೀಡಿರುವ ಸರ್ಕಾರ ನಿಮ್ಮ ತೆರಿಗೆ ಹಣದಲ್ಲೇ ಮಹಿಳೆಯರಿಗೆ ಎರಡು ಸಾವಿರ ಹಾಕುತ್ತಿದ್ದು ಮುಂದೆ ಎರಡು ಸಾವಿರವನ್ನು ನಿಮ್ಮ ಮೇಲೆ ಸಾಲ ಹೊರಿಸಲಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ತಾತ್ಕಾಲಿಕ ಖುಷಿ. ಇದು ಬಹಳ ದಿನ ನಡೆಯಲ್ಲ. ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ತೀರ್ಮಾನ ಕೈಗೊಳ್ಳಿ ಎಂದು ಕಿವಿಮಾತು ಹೇಳಿದರು.
ಹಳ್ಳಿಗಳಿಗೂ ಈಗ ಆಧುನಿಕತೆ ಪ್ರಭಾವ ಆವರಿಸಿದೆ. ನಾವು ಸಣ್ಣ ಮಕ್ಕಳಿದ್ದಾಗ ನಮ್ಮ ಅಜ್ಜಿ ಬೆಳಗ್ಗೆ ಮತ್ತು ಸಾಯಂಕಾಲ ದೀಪಕ್ಕೆ ಎಣ್ಣೆ ತೆಗೆದುಕೊಂಡು ದೇವಸ್ಥಾನಕ್ಕೆ ಹೋಗಿ ಸ್ವಚ್ಛ ಮಾಡಿ ದೀಪ ಹಚ್ಚುತ್ತಿದ್ದರು. ಆ ಪರಿಸ್ಥಿತಿ ಹಳ್ಳಿಗಳಲ್ಲಿ ಕಡಿಮೆಯಾಗುತ್ತಿದೆ. ಅಂದು ಹಳ್ಳಿಗಳಿಗೆ ವಿದ್ಯುತ್, ರಸ್ತೆ, ಕುಡಿಯುವ ನೀರು ಇರಲಿಲ್ಲ. ದೇಶ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ. ನರೇಂದ್ರಮೋದಿ ಸರ್ಕಾರದಲ್ಲಿ ನಾನು ಎರಡು ಇಲಾಖೆ ಮಂತ್ರಿಯಾಗಿದ್ದೇನೆ. ದೇಶ ವಿಶ್ವಕ್ಕೆ ಸರಿಸಾಟಿಯಾಗಿ ಹೋಗುತ್ತಿದೆ. ದೇಶದಲ್ಲಿ ಆಟೋಮೊಬೈಲ್ ಇಂಡಸ್ಟ್ರಿಗೆ ಆದ್ಯತೆ ನೀಡಿದ್ದೇವೆ. ಜನರು ಕೆಟ್ಟ ಹೊಗೆ ಕುಡಿಯಬಾರದೆಂದು ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿದ್ದೇವೆ, ತಯಾರಾದ ಎಲೆಕ್ಟ್ರಿಕ್ ವಾಹನಗಳಲ್ಲಿ ಶೇ.30 ವಿದೇಶಕ್ಕೆ ರಫ್ತು ಮಾಡುತ್ತಿದ್ದೇವೆ. ಭಾರತ ದೇಶ ಪ್ರಪಂಚದಲ್ಲಿ ಆರ್ಥಿಕವಾಗಿ ಬೆಳೆಯುತ್ತಿರುವುದರಲ್ಲಿ ಮೂರನೇ ಸ್ಥಾನಕ್ಕೆ ಹೋಗುತ್ತಿದೆ ಎಂದರು.
ಶಾಸಕ ಎ. ಮಂಜು ಮಾತನಾಡಿ, ಹೊಸದಾಗಿ ನಿರ್ಮಿಸಿದ ದೇವಸ್ಥಾನಗಳಲ್ಲಿ ಪ್ರಜೆ ಪುನಸ್ಕಾರಗಳನ್ನು ಕೈಗೊಂಡು ಮುಂದೆಯೂ ಉಳಿಸಿಕೊಂಡು ಹೋಗಬೇಕು. ಈ ಭಾಗದ ಹಳ್ಳಿಗಳಿಗೆ ಹೇಮಾವತಿ ನದಿಯಿಂದ ಕೆರೆ ಕಟ್ಟೆಗಳಿಗೆ ಇನ್ನೊಂದು ವರ್ಷದಲ್ಲಿ ನೀರು ಹರಿಸಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯರಾದ ಸೂರಜ್ ರೇವಣ್ಣ, ಸಿ.ಎನ್.ಮಂಜೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕ ಅಶ್ವಿನ್‌ಕುಮಾರ್, ಮುಖಂಡರಾದ ಚೌಡೇಗೌಡ, ಕೆ. ಸತೀಶ್ ಇತರರಿದ್ದರು.
ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕ್ರೇನ್ ಮೂಲಕ ಅನಾನಸ್ ಹಾರ ಹಾಕಿ, ಪಟಾಕಿ ಸಿಡಿಸಿ, ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.
ತಂಬಾಕಿಗೆ ಉತ್ತಮ ಬೆಲೆ ಕೊಡಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಅವರು ವಿದೇಶ ಪ್ರವಾಸದಲ್ಲಿದ್ದ ಕಾರಣ ತಡವಾಗಿದೆ. ದೇವೇಗೌಡರು ಸದಾ ತಂಬಾಕು ಬೆಳೆಗಾರರ ನೆರವಿಗಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ
ಕೇಂದ್ರ ಸಚಿವ