ಹಿರೀಸಾವೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎನ್. ಶಿವನಂಜೇಗೌಡ ಉದ್ಘಾಟಿಸಿದರು. ಎಸ್.ಮಂಜೇಗೌಡ, ಎಸ್, ರೂಪಾದೇವಿ ಬಿರಾದಾರ್, ಲಕ್ಷ್ಮಣ್ ಗೌಡ ಬಿ. ಎಚ್., ಎಚ್.ಎನ್. ಶಿವನಂಜೇಗೌಡ ಇತರರು ಇದ್ದರು.
- ಪಿಎಸ್‌ಐ ರೂಪಾದೇವಿ ಬಿರಾದರ್ ಕಳವಳ
- ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ
ಹಿರೀಸಾವೆ: ಮಾದಕ ವಸ್ತುಗಳ ಬಳಕೆ ಪರಿಣಾಮ ಯುವ ಸಮೂಹ ದಾರಿ ತಪ್ಪುತ್ತಿದ್ದು, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಹಿರೀಸಾವೆ ಪಿಎಸ್‌ಐ ರೂಪಾದೇವಿ ಬಿರಾದರ್ ಹೇಳಿದರು.
ಪಟ್ಟಣದ ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚನ್ನರಾಯಪಟ್ಟಣ ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಾದಕ ವಸ್ತುಗಳ ಬಳಕೆ ಯುವಜನರ ಜೀವನಕ್ಕೆ ಮಾರಕ ಎಂದರು.
ನಗರ ಪ್ರದೇಶಗಳಲ್ಲಿ ಮಾತ್ರ ದೊರೆಯುತ್ತಿದ್ದ ಮಾದಕ ವಸ್ತುಗಳು ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ಮಾರಾಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿವಸ್ವಾಮಿ ಮಾತನಾಡಿ, ಮಾದಕ ದ್ರವ್ಯಗಳ ಅಥವಾ ವಸ್ತುಗಳ ಬಳಕೆಯು ಆರೋಗ್ಯಕ್ಕೆ ಹಾನಿಕಾರಕವಾಗಲಿದೆ. ಹೀಗಾಗಿ ಮಾದಕ ವಸ್ತುಗಳಿಂದ ದೂರವಿರಿ ಎಂದರು.
ಸಿಪಿಐ ಎಸ್.ಮಂಜೇಗೌಡ ಮಾತನಾಡಿ, 18 ವರ್ಷ ತುಂಬದ ಮಕ್ಕಳಿಗೆ ದ್ವಿಚಕ್ರ ಹಾಗೂ ಇತರ ವಾಹನಗಳನ್ನು ಚಾಲನೆ ಮಾಡಲು ನೀಡುವುದು ಅಪರಾಧವಾಗಲಿದೆ. ಹೆಲ್ಮೆಟ್ ಧರಿಸದೆ ಹಾಗೂ ಪರವಾನಗಿ ತೆಗೆ ವಿಮೆ ಹೊಂದಿಲ್ಲದಿದ್ದರೆ ಅಪಘಾತ ನಡೆದ ಸಂದರ್ಭದಲ್ಲಿ ಕಾನೂನು ತೊಡಕು ಉಂಟಾಗಲಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಣ್ ಗೌಡ ಬಿ.ಎಚ್. ಅಧ್ಯಕ್ಷತೆ ವಹಿಸಿದ್ದರು
ರೋಟರಿ ಸಂಸ್ಥೆ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 5 ಸಿಮೆಂಟ್ ಬೆಂಚ್ ಗಳನ್ನು ನೀಡಲಾಯಿತು. ಕಾಲೇಜು ವತಿಯಿಂದ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎನ್.ಶಿವನಂಜೇಗೌಡ ಹಾಗೂ ಪಿಎಸ್‌ಐ ರೂಪಾದೇವಿ ಬಿರಾದರ್ ಅವರನ್ನು ಅಭಿನಂದಿಸಲಾಯಿತು. ಸಾಮಾಜಿಕ ಚಿಂತಕ ನಿಂಬೇಹಳ್ಳಿ ಎಲೆಕ್ಟ್ರಿಕಲ್ ಮಂಜುನಾಥ ಅವರು ಕಾಲೇಜಿನ ಆವರಣಕ್ಕೆ ತಂತಿಬೇಲಿ ನಿರ್ಮಿಸಿ ಕೊಡುವುದಾಗಿ ತಿಳಿಸಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಹರೀಶ್, ಸದಸ್ಯರಾದ ಸಿ.ಎನ್.ನವೀನ್, ಬಿ.ಬಿ.ವಿಜಯ್, ಪದ್ಮನಾಭ, ಎನ್.ಮಂಜುನಾಥ್, ಡಾ.ಸಿ.ಎಲ್. ನವೀನ್, ರಾಜು, ಕಿಶೋರ್, ಕಾಲೇಜಿನ ಪ್ರಾಧ್ಯಾಪಕರಾದ ಎಚ್.ಜೆ.ಹರೀಶ್, ಮಂಜುನಾಥ್, ಕುಮಾರ್, ಆಶಾರಾಣಿ ಹಾಗೂ ವಿದ್ಯಾರ್ಥಿಗಳು ಇದ್ದರು.