ಅರಕಲಗೂಡು ತಾಲೂಕಿನ ರುದ್ರಪಟ್ಟಣದಲ್ಲಿ ಗುರುವಾರ ನಡೆದ 23ನೇ ಸಂಗೀತೋತ್ಸವದಲ್ಲಿ ವಿದ್ವಾನ್ ಟಿ.ಎಸ್. ಪಟ್ಟಾಭಿರಾಮ ಪಂಡಿತ್ ಸಂಗೀತ ಕಛೇರಿ ಪ್ರಸ್ತುತಪಡಿಸಿದರು. ಪಕ್ಕವಾದ್ಯದಲ್ಲಿ ವಿದ್ವಾನ್ ಟಿ.ಕೆ.ರಾಮಾನುಜಾ ಆಚಾರ್ಯ ಪಿಟೀಲು, ವಿದ್ವಾನ್ ಎಚ್.ಎಸ್. ಸುಧೀಂದ್ರ ಮೃದಂಗ, ವಿದ್ವಾನ್ ಆರ್.ಓಂಕಾರ್ ಘಟ ವಾದನ ಸಹಕಾರ ನಾದಸುಧೆಗೆ ಮೆರುಗು ನೀಡಿತು.
- ಪ್ರಸಿದ್ಧ ಕಲಾವಿದರಿಂದ ನಾದ ಲಹರಿ
- ಕಲಾ ರಂಗದ ವಿದ್ವನ್ಮಣಿಗಳಿಗೆ ಗೌರವಾರ್ಪಣೆ
- 23ನೇ ವಾರ್ಷಿಕ ಸಂಗೀತೋತ್ಸವ
ಅರಕಲಗೂಡು : ತಾಲೂಕಿನ ರುದ್ರಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ 23ನೇ ವಾರ್ಷಿಕ ಸಂಗೀತೋತ್ಸವದಲ್ಲಿ ಪ್ರಸಿದ್ಧ ಕಲಾವಿದರು ವಿವಿಧ ಸಂಗೀತ ಪ್ರಕಾರಗಳನ್ನು ನುಡಿಸುವ ಮೂಲಕ ಪ್ರೇಕ್ಷಕರ ಮನ ರಂಜಿಸಿದರು.
ವಿದ್ವಾನ್ ಟಿ.ಎಸ್.ಪಟ್ಟಾಭಿರಾಮ ಪಂಡಿತ್ ಅವರು ಮೂರು ತಾಸು ನಿರಂತರವಾಗಿ ಸಂಗೀತ ಕಛೇರಿ ಪ್ರಸ್ತುತಪಡಿಸಿದ್ದು ಸಂಗೀತ ಪ್ರಿಯರಿಗೆ ರಸದೌತಣವನ್ನು ಉಣಬಡಿಸಿತು. ಪಕ್ಕವಾದ್ಯದಲ್ಲಿ ವಿದ್ವಾನ್ ಟಿ.ಕೆ.ರಾಮಾನುಜಾ ಆಚಾರ್ಯ ಪಿಟೀಲು, ವಿದ್ವಾನ್ ಎಚ್.ಎಸ್. ಸುಧೀಂದ್ರ ಮೃದಂಗ, ವಿದ್ವಾನ್ ಆರ್.ಓಂಕಾರ್ ಅವರ ಘಟ ವಾದನ ಸಹಕಾರ ನಾದಸುಧೆಗೆ ಮೆರುಗು ನೀಡಿತು.
ವಿದ್ವಾನ್ ಎಸ್.ಕೆ.ಹೃಷಿಕೇಶ್ ಭಾರದ್ವಾಜ್ ಎರಡು ತಾಸು ಗಾಯನ ಸಂಗೀತ ಅಭಿಮಾನಗಳ ಮನಸೂರೆಗೊಳಿಸಿತು. ವಿದ್ವಾನ್ ಸಿ.ವಿ.ಶ್ರುತಿ ಪಿಟೀಲು ನುಡಿಸಿದರೆ, ಬಿ.ಜೆ.ಶ್ರೀನಿವಾಸ್ ಮೃದಂಗ, ವಿದ್ವಾನ್ ಸುಮುಖ್ ಖಂಜಿರ ಸಾಥ್ ವಿಶೇಷವಾಗಿತ್ತು.
ವಿದ್ವಾನ್ ಎಚ್.ವಿ.ರಘುರಾಮ್, ವಿದ್ವಾನ್ ಎಂ.ವಿ.ವಿಶ್ವಜಿತ್, ವಿದ್ವನ್ ಎಸ್.ಆರ್.ಕಾರ್ತಿಕೇಯ ಅವರು ಎರಡೂವರೆ ತಾಸು ಪಿಟೀಲು ತ್ರಯ ನುಡಿಸಿ ನಾದಲೋಕವನ್ನೇ ಸೃಷ್ಟಿಸಿದರು. ವಿದ್ವಾನ್ ಎ.ರೇಣುಕಾ ಪ್ರಸಾದ್ ಮೃದಂಗ ಬಾರಿಸಿದರೆ, ವಿದ್ವಾನ್.ಎ.ಎಸ್.ಎನ್.ಸ್ವಾಮಿ ಅವರು ಖಂಜಿರ ನುಡಿಸಿ, ವಿದ್ವಾನ್ ಶರತ್ ಕೌಶಿಕ್ ಘಟ ನುಡಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.
ಉತ್ಸವ ಆಯೋಜಕ ವಿದ್ವಾನ್ ಆರ್.ಕೆ. ಪದ್ಮನಾಭ ಅವರು ಸಂಗೀತ ಕಚೇರಿ ನಡೆಸಿಕೊಟ್ಟ ಕಲಾವಿದರನ್ನು ಸನ್ಮಾನಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಮನ ಸೆಳೆಯುತ್ತಿದೆ ಸಪ್ತಸ್ವರ ದೇವತಾ ಧ್ಯಾನ ಮಂದಿರ :
ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ 23ನೇ ಸಂಗೀತೋತ್ಸವದಲ್ಲಿ ಸಪ್ತಸ್ವರ ದೇವತಾ ಧ್ಯಾನ ಮಂದಿರ ಹಾಗೂ ದ್ವಾದಶ ಸ್ವರ ಸ್ತಂಬ ಮಂಟಪ ಸಂಗೀತಾಭಿಮಾನಿಗಳ ಮನ ಸೆಳೆಯುತ್ತಿದೆ. ತಂಬೂರಿಯಾಕಾರದಲ್ಲಿರುವ ಸಪ್ತಸ್ವರ ದೇವತಾ ಧ್ಯಾನ ಮಂದಿರ ಹಾಗೂ ದ್ವಾದಶ ಸ್ವರ ಸ್ತಂಬ ಮಂಟಪಗಳನ್ನು ಸಂಗೀತಪ್ರಿಯರು ಕಣ್ತುಂಬಿಕೊಳ್ಳುತ್ತಿದ್ದು ರಾತ್ರಿ ವೇಳೆ ನೀರಿನ ಕಾರಂಜಿ, ವಿದ್ಯುತ್ ಬೆಳಕಿನ ಚಿತ್ತಾರ ಜನರನ್ನು ಆಕರ್ಷಿಸುತ್ತಿದೆ.