ಜಿಲ್ಲೆಯ ರೈತರು ಹಾಗೂ ಬಡ ಜನರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
- ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ
- ರಾಜ್ಯ ರೈತ ಸಂಘದಿಂದ ಪ್ರತಿಭಟನೆ
- ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ಮನವಿ
ಹಾಸನ: ಜಿಲ್ಲೆಯ ರೈತರು ಹಾಗೂ ಬಡಜನರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇತ್ತೀಚೆಗೆ ಶಾಂತಿಯುತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಬೀರನಹಳ್ಳಿ ಕೆರೆ ಪ್ರದೇಶದಲ್ಲಿ 2007ರಲ್ಲಿ ಬಡವರಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡಿದ್ದ ಸರ್ಕಾರ, ನಂತರ ಅದನ್ನು ಹಿಂಪಡೆದಿದ್ದು, ಈವರೆಗೂ ಪರ್ಯಾಯ ನಿವೇಶನ ಕಲ್ಪಿಸಿಲ್ಲ. ಇದರಿಂದಾಗಿ ಅಲ್ಲಿನ 72 ಕುಟುಂಬಗಳು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅವರಿಗೆ ಪರ್ಯಾಯ ನಿವೇಶನ ನೀಡುವ ಮೂಲಕ ಬದುಕನ್ನು ಸರ್ಕಾರ ಮತ್ತೆ ಕಟ್ಟಿಕೊಡಬೇಕು ಎಂದು ಒತ್ತಾಯಿಸಿದರು.
ಇದೇ ರೀತಿಯ ಸಮಸ್ಯೆ ಬೇಲೂರು ತಾಲೂಕಿನ ಬಂಟೇನಹಳ್ಳಿಯಲ್ಲೂ ಇದೆ. ಅಲ್ಲಿ 400ಕ್ಕೂ ಹೆಚ್ಚು ವಿವಿಧ ಸಮುದಾಯಗಳಿಗೆ ಸೇರಿದ ಜನ ವಾಸವಾಗಿದ್ದು, ಅವರಿಗೆ ಇದೂವರೆಗೂ ನಿವೇಶನ ನೀಡದೆ ವಂಚಿಸಲಾಗುತ್ತಿದೆ. ಸರ್ಕಾರ ಇನ್ನಾದರೂ ಬಡವರಿಗೆ ನಿವೇಶನ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕುವ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ವಿವಿಧೆಡೆ ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ಪಡೆದ ಫಲಾನುಭವಿಗಳ ಹಕ್ಕು ಪತ್ರಗಳನ್ನು ತಡೆ ಹಿಡಿಯುವ ಕೆಲಸ ನಡೆಯುತ್ತಿರುವುದನ್ನು ಖಂಡಿಸಿದರು. ಇದು ಬಡವರ ಹಕ್ಕುಗಳನ್ನು ಕಸಿದುಕೊಳ್ಳುವ ಹಾಗೂ ವಂಚಿಸುವ ಕ್ರಮವಾಗಿದ್ದು, ಸರ್ಕಾರ ಇಂತಹ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೊಹಮ್ಮದ್ ಸಾಧಿಕ್ ಪಾಷ, ಪವಿತ್ರಾ ಇದ್ದರು.