ಚಿಕ್ಕಂದೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಿದರು.
ಸಕಲೇಶಪುರ: ಉತ್ತಮ ರಸ್ತೆಗಳು ಅಭಿವೃದ್ಧಿಗೆ ಪೂರಕ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಚಿಕ್ಕಂದೂರು ಗ್ರಾಮದಲ್ಲಿ 3 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಅವರು, ಸರ್ಕಾರ ಮೂಲ ಸೌಕರ್ಯಗಳಲ್ಲಿ ರಸ್ತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ. ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುವುದರಿಂದ ರಸ್ತೆಗಳು ಅತಿ ವೇಗವಾಗಿ ದುಸ್ಥಿತಿಗೆ ಒಳಗಾಗುತ್ತಿವೆ. ತಾಲೂಕಿನಲ್ಲಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ರಸ್ತೆಗಳ ಪಾತ್ರ ಮಹತ್ವದ್ದು. ಸದ್ಯ ಕಾಡಾನೆ ಸಮಸ್ಯೆಯಿಂದ ಬಳಲುತ್ತಿರುವ ಕ್ಷೇತ್ರದಲ್ಲಿ ರಸ್ತೆಗಳ ಸುಧಾರಣೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ತಮ್ಮ ಶಕ್ತಿ ಮೀರಿ ಸರ್ಕಾರದಿಂದ ಅನುದಾನ ತರಲಾಗಿದ್ದು. ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದರೆ, ಎಷ್ಟೇ ಅನುದಾನ ತಂದರೂ ಕ್ಷೇತ್ರ ವಿಶಾಲವಾಗಿರುವ ಕಾರಣ ಸಾಕಷ್ಟು ರಸ್ತೆ ಕಾಮಗಾರಿಗಳು ಬಾಕಿ ಉಳಿದಿದ್ದು, ಆದ್ಯತೆ ಮೇಲೆ ಕಾಮಗಾರಿ ನಡೆಸಲಾಗುತ್ತಿದೆ. ಸದ್ಯ ಅಭಿವೃದ್ಧಿಗೊಳ್ಳುತ್ತಿರುವ ರಸ್ತೆ ಕಾಮಗಾರಿಗಳು ಅತ್ಯಂತ ಗುಣಮಟ್ಟದಿಂದ ಕೊಡಿರುವಂತೆ ನೋಡಿಕೊಳ್ಳಲಾಗುತ್ತಿದ್ದು, ಕಳಪೆ ಕಾಮಗಾರಿಗೆ ಅವಕಾಶವಿಲ್ಲ ಎಂದರು.
ಕಿರಿಕೊಡ್ಲಿಮಠದ ಶ್ರಿ ಶಂಭುನಾಥ ಸ್ವಾಮಿಜಿ ಮಾತನಾಡಿ, ಕ್ಷೇತ್ರದ ಕಟ್ಟಕಡೆಯ ಗ್ರಾಮಗಳಲ್ಲೂ ಅಭಿವೃದ್ಧಿ ಸ್ಪರ್ಶವಾಗುತ್ತಿರುವುದು ಉತ್ತಮ ಬೆಳವಣಿಗೆ. ಸದ್ಯ ತಾಲೂಕಿನ ಬಹುತೇಕ ಮುಖ್ಯ ರಸ್ತೆಗಳು ಗುಂಡಿ ರಹಿತವಾಗಿದ್ದು, ಗ್ರಾಮೀಣದ ಭಾಗದ ರಸ್ತೆಗಳು ಮತ್ತಷ್ಟು ಅಭಿವೃದ್ಧಿಗೊಳ್ಳಬೇಕಿದೆ ಎಂದರು.
ಗ್ರಾಮದ ಮುಖಂಡರಾದ ಸವಿನ್, ಪವಿತ್ರಾ ಮಂಜುನಾಥ್, ಸುಶೀಲಮ್ಮ, ಸುನೀತಾ, ರವಿ ಇದ್ದರು.