ಬೇಲೂರು ಸೆಸ್ಕ್ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೇಲೂರು: ತಾಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡದಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಸೆಸ್ಕ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ನಡುವೆಯೂ ರಾತ್ರಿ ಸಮಯ ಮಾತ್ರ ವಿದ್ಯುತ್ ಕೊಡುತ್ತಿರುವುದರಿಂದ ನೀರು ಹಾಯಿಸಲು ಹೋಗುವುದು ಕಷ್ಟವಾಗಿದೆ. ಒಂದು ಗಂಟೆ ವಿದ್ಯುತ್ ಸರಬರಾಜು ಮಾಡಿದ ತಕ್ಷಣ ವಿದ್ಯುತ್ ಕಡಿತಗೊಳಿಸುವುದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ತಾಲೂಕಿನ ದೇವಲಾಪುರ, ದಬ್ಬೆ, ಕರ್ಕಿಹಳ್ಳಿ, ತೊಳಲು ಫೀಡರ್ ವ್ಯಾಪ್ತಿಯ ಗ್ರಾಮಗಳಲ್ಲಿ ಸಮಸ್ಯೆ ಹೆಚ್ಚಾಗಿದ್ದು, ಗೆಂಡೆಹಳ್ಳಿ ವಿದ್ಯುತ್ ಕೇಂದ್ರಕ್ಕೆ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಅಗತ್ಯವಿದೆ. ನಾಲ್ಕು ವರ್ಷಗಳಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಮಪರ್ಕವಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರೈತರಿಗೆ ವಿದ್ಯುತ್ ಅವಶ್ಯಕತೆ ಹೆಚ್ಚಿರುತ್ತದೆ. ಆದರೆ, ಲೋಡ್ ಶೆಡ್ಡಿಂಗ್, ಲೈನ್ ರಿಪೇರಿ ಮುಂತಾದ ಕಾರಣಗಳನ್ನು ಹೇಳಿ ಪದೇ ಪದೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಕೇವಲ 3 ರಿಂದ 4 ಗಂಟೆ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಅದು ಕೂಡ ನಿರಂತರವಾಗಿಲ್ಲ. ಕಳೆದ ವರ್ಷ ಇದೇ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಿದಾಗ ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ವರ್ಷ ಕಳೆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ದೂರಿದರು.
ಸ್ಥಳಕ್ಕಾಗಮಿಸಿದ ಹಿರಿಯ ಅಧಿಕಾರಿಗಳ ಮನವಿ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು. ಮುಖಂಡರಾದ ನಂಜಪ್ಪ, ತಾರಾನಾಥ್, ಶ್ರೀನಿವಾಸ್, ದಿನೇಶ್, ಸುರೇಶ್, ಸೋಮಣ್ಣ, ಹುಲಿಯಪ್ಪಗೌಡ, ಸಚಿನ್, ಬಸವರಾಜು, ಮಲ್ಲಿಕಾರ್ಜುನ, ಮಂಜುನಾಥ್, ರಂಗನಾಥ್, ಚಂದ್ರು, ರಮೇಶ್, ಪ್ರಸನ್ನ, ಚಂದ್ರಶೇಖರ್, ಸುರೇಶಣ್ಣ, ಅಯ್ಯಪ್ಪಣ್ಣ, ಸೆಸ್ಕ್ ಎಇಇ ಬಸವರಾಜು, ಎಇ ರೇವಣ್ಣ ಇತರರಿದ್ದರು.