ಚನ್ನರಾಯಪಟ್ಟಣದ ಟೈಮ್ಸ್ ಪಿಯು ಕಾಲೇಜು ಕಾರ್ಯಕ್ರಮದಲ್ಲಿ 2025-26 ನೇ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು. ಬಿ.ಕೆ.ಗಂಗಾಧರ್, ಎ.ಸಿ.ಸುನೀಲ್, ಎಚ್.ಎಂ.ಶ್ರೀಕಂಠ, ಕೆ.ವಿ.ಸಂಜಯ್ ಇತರರು ಇದ್ದರು.
ಚನ್ನರಾಯಪಟ್ಟಣ: ವಿದ್ಯಾರ್ಥಿಗಳಿಗೆ ಗುಣಮಟ್ಟ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಪ್ರಮುಖ ಜವಾಬ್ದಾರಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಟೈಮ್ಸ್ ಪಿಯು ಕಾಲೇಜು ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ 2025-26ನೇ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣದ ಜತೆ ವಿದ್ಯಾರ್ಥಿಗಳಲ್ಲಿ ಉತ್ತಮವಾದ ನಡತೆ ರೂಢಿಸುವುದೇ ಶಿಕ್ಷಣ ಸಂಸ್ಥೆಗಳ ಮುಖ್ಯ ಗುರಿ. ವಿದ್ಯಾರ್ಥಿಗಳಲ್ಲಿ ಉತ್ತಮ ಗುಣ ಬೆಳೆಸುವುದು, ಚಾಣಕ್ಯತನ ಮತ್ತು ನೈತಿಕ ಮೌಲ್ಯ ಬೆಳೆಸುವುದು ಶಿಕ್ಷಣ ಸಂಸ್ಥೆಗಳ ಉದ್ದೇಶ. ಆದ್ದರಿಂದ ಶಿಕ್ಷಣದ ಮುಖ್ಯ ಉದ್ದೇಶಗಳನ್ನು ಅರಿತು ವಿದ್ಯಾರ್ಥಿಗಳನ್ನು ತಮ್ಮ ಗುರಿ ಸಾಧಿಸಿಲು ಗಮನಹರಿಸಬೇಕು ಎಂದರು.
ಪ್ರತಿಯೊಬ್ಬ ನಾಗರಿಕನಿಗೂ ವಿದ್ಯಾಭ್ಯಾಸದ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಇಂದು ಸ್ಪರ್ಧೆ ಹೆಚ್ಚಾಗಿದೆ. ಎಂಬಿಬಿಎಸ್ ಮಾತ್ರವಲ್ಲದೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ರೇಡಿಯಾಲಜಿ, ಡಿ.ಫಾರ್ಮಾ, ಬಿ.ಾರ್ಮಾ ಸೇರಿದಂತೆ ಅನೇಕ ಕೋಸ್‌ರ್ಗಳಿದ್ದು, ವಿಫುಲ ಉದ್ಯೋಗಾವಕಾಶವೂ ಇದೆ. ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪತ್ರಿಕೆಗಳನ್ನು ಓದುವುದರಿಂದ ಜ್ಞಾನಮಟ್ಟ ಹೆಚ್ಚುತ್ತದೆ. ನಿತ್ಯ ಪತ್ರಿಕೆ ಓದುವ ಅಭ್ಯಾಸವನ್ನು ಚಿಕ್ಕಂದಿನಲ್ಲೇ ರೂಢಿಸಿಕೊಳ್ಳಬೇಕು. ಇದರಿಂದ ಬರೆಯುವ, ಮಾತನಾಡುವ ಕೌಶಲ ವೃದ್ಧಿಯಾಗುತ್ತದೆ. ಪಠ್ಯ ಪುಸ್ತಕಗಳಿಗೆ ಸೀಮಿತವಾದರೆ ಯಶಸ್ಸು ಕಾಣುವುದು ಕಷ್ಟ. ಸಾಧನೆಯ ಕನಸು ಕಾಣುವ ವಿದ್ಯಾರ್ಥಿಗಳು ಪಠ್ಯದ ಹೊರತಾದ ಜ್ಞಾನವನ್ನು ಸಂಪಾದಿಸಬೇಕು. ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಸುತ್ತದೆ. ಸಾಮಾನ್ಯ ಜ್ಞಾನ ಬೆಳೆಯುತ್ತದೆ ಎಂದು ಸಲಹೆ ನೀಡಿದರು.
ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಮಾತನಾಡಿದರು. ದ್ವಿತೀಯ ಪಿಯು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಎ.ಸಿ. ಸುನೀಲ್ ಕುಮಾರ್. ಉಪಪ್ರಾಂಶುಪಾಲ ಎಚ್.ಎಂ.ಶ್ರೀಕಂಠ, ಆಡಳಿತಾಧಿಕಾರಿ ಕೆ.ವಿ.ಸಂಜಯ್ ಸೇರಿದಂತೆ ಅಧ್ಯಾಪಕ ವರ್ಗ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.