ಬಾಗೂರು ಹೋಬಳಿಯ ಕುರಿ ಕಾವಲು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದೊಡ್ಡಮ್ಮ ದೇವಿ, ಶ್ರೀ ಚಿಕ್ಕಮ್ಮ ದೇವಿಯವರ ನೂತನ ದೇವಾಲಯ ವಿಗ್ರಹ ಪ್ರತಿಷ್ಠಾಪನೆ ಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಶ್ರೀ ವಿಧು ಶೇಖರ ಭಾರತಿ ಸ್ವಾಮೀಜಿಗಳು ಮಾತನಾಡಿದರು. ಮಂಜೇಗೌಡ, ಯೋಗೇಶ್, ವೆಂಕಟೇಶ್, ಇದ್ದರು.
- ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿಕೆ
- ಧಾರ್ಮಿಕ ಸಮಾರಂಭ
ಬಾಗೂರು: ಮನುಷ್ಯ ಇತರರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಸಹಾಯ ಮಾಡುವ ಮೂಲಕ ಮಾದರಿಯಾಗಿರುವುದೇ ನಿಜವಾದ ಜೀವನ ಎಂದು ಶೃಂಗೇರಿ ಶಾರದಾ ಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ತಿಳಿಸಿದರು.
ಹೋಬಳಿಯ ಕುರಿ ಕಾವಲು ಗ್ರಾಮದ ಶ್ರೀ ದೊಡ್ಡಮ್ಮ ದೇವಿ, ಶ್ರೀ ಚಿಕ್ಕಮ್ಮ ದೇವಿಯವರ ನೂತನ ದೇಗುಲಗಳ ವಿಗ್ರಹ ಪ್ರತಿಷ್ಠಾಪನೆಯ ಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸ್ತ್ರದ ಪ್ರಕಾರ ದುಃಖಿಗಳಿಗೆ ಸಾಂತ್ವನ, ನಿರಾಶ್ರಿತರಿಗೆ ಸಹಾಯ, ಹಸಿದವರಿಗೆ ಆಹಾರ ನೀಡಿ ಸನ್ಮಾರ್ಗದಲ್ಲಿ ನಡೆಸುವುದೇ ಉಪಕಾರ. ಇದರಿಂದ ಮನುಷ್ಯನ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದರು.
ದೊಡ್ಡ ಅಧಿಕಾರಸ್ಥರೇ ಆಗಲಿ ಶ್ರೀಮಂತರೇ ಆಗಲಿ ಎಲ್ಲರಿಗೂ ಗೌರವ ಕೊಡುವ ಕೆಲಸ ಮಾಡುವ ಮೂಲಕ ಜನಸಾಮಾನ್ಯರಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುವುದೇ ಹಿಂದೂ ಧರ್ಮದ ಆಚರಣೆ. ಹಿಂದೂ ಧರ್ಮ ಪ್ರಪಂಚದಲ್ಲೇ ಪ್ರಾಚೀನವಾದದ್ದು 1200 ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರು ದೇಶದಲ್ಲಿ ಜ್ಞಾನದ ಧರ್ಮ ಪ್ರಚಾರ ಮಾಡುತ್ತಾ ನಾಲ್ಕು ಶಕ್ತಿ ಪೀಠಗಳನ್ನು ಸ್ಥಾಪಿಸಿದ್ದಾರೆ. ಒಡಿಶಾದಲ್ಲಿ ಗೋವರ್ಧನ ಪೀಠ, ಗುಜರಾತ್‌ನಲ್ಲಿ ಕಾಳಿಕಾ ಪೀಠ, ಉತ್ತರಾಖಂಡದಲ್ಲಿ ಜ್ಯೋತಿಷ್ ಪೀಠ, ಕರ್ನಾಟಕದಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿ ಧಾರ್ಮಿಕ ಮನೋಭಾವನೆಗಳ ಮೂಲಕ ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಪೂರ್ವಿಕರು ಮುಂದಾಗಿದ್ದರು ಎಂದರು.
ಸಮಾರಂಭದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಎ.ಸಿ.ಆನಂದ್ ಕುಮಾರ್, ಸರ್ವೆ ಮಂಜೇಗೌಡ, ನೆಟ್ಟೆಕೆರೆ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್, ಜೋಯಿಸರಹಳ್ಳಿ ಮಂಜುನಾಥ್, ಗೌರಮ್ಮ ದೇವರಾಜ್, ಉದ್ಯಮಿಗಳಾದ ದೊಡ್ಡೇಗೌಡ, ನಾಗರಾಜ್, ನಂಜೇಶ್, ದತ್ತಾತ್ರೇಯ, ಕೋಕಿಲ ವೆಂಕಟೇಶ್, ಅಗಸರಹಳ್ಳಿ ಚಂದ್ರೇಗೌಡ, ದ್ಯವೇನಹಳ್ಳಿ ಮಂಜುನಾಥ್, ಬೆಂಗಳೂರು ಆಶಾ ಶ್ಯಾಮ್, ನಂಜೆಶಿ, ಲಿಂಗರಾಜ್, ಶಿವರ ಶಿವರಾಜ್, ಹೊಂಗೆಹಳ್ಳಿ ಮಂಜುನಾಥ್, ಸಂಪತ್ ಕುಮಾರ್, ಶಿಲ್ಪಿ ನಾಗರಾಜ್, ಮಹಾದೇವ್, ಇತರರು ಹಾಜರಿದ್ದರು.