ಶಾಸಕ ಎಚ್.ಡಿ.ರೇವಣ್ಣ ಹಾಸನ ತಾಲೂಕು ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ತಹಸೀಲ್ದಾರ್ ಗೀತಾ ಇತರರಿದ್ದರು.
- ಹದಿನೈದು ದಿನದೊಳಗೆ ಸಮಸ್ಯೆ ಬಗೆಹರಿಸಿ
- ಅಧಿಕಾರಿಗಳಿಗೆ ಶಾಸಕ ಎಚ್.ಡಿ.ರೇವಣ್ಣ ಸೂಚನೆ
- ಜಿಲ್ಲಾಧಿಕಾರಿ, ತಹಸೀಲ್ದಾರ್ ವಿರುದ್ಧ ಅಸಮಾಧಾನ
ಹಾಸನ: ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ರೈತರ ಸಮಸ್ಯೆಗಳು ಬಗೆಹರಿಯದೆ ಉಳಿದಿರುವ ಪ್ರಕರಣಗಳನ್ನು 15 ದಿನಗಳೊಳಗೆ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಒತ್ತಾಯಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ವಿಧಾನಸಭಾ ಕ್ಷೇತ್ರದ ವಿವಿಧ ಹೋಬಳಿಗಳಲ್ಲಿ 30ರಿಂದ 40 ವರ್ಷಗಳಿಂದ ಪಹಣಿ, ದುರಸ್ತಿ, ಪೋಡಿ ಸೇರಿದಂತೆ ಹಲವು ರೈತರ ಸಮಸ್ಯೆಗಳು ಬಾಕಿ ಉಳಿದಿವೆ. ರೈತರು ಪ್ರತಿದಿನ ತಾಲೂಕು ಕಚೇರಿ ಅಲೆದಾಡುತ್ತಾ ಬೇಸತ್ತಿದ್ದಾರೆ. ಈ ನಡುವೆ ತಾಲೂಕು ಹಾಗೂ ಜಿಲ್ಲಾಡಳಿತ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಆದರೆ, ಹಣವಿರುವವರ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದ ಕಡತಗಳನ್ನು ತಕ್ಷಣವೇ ವಿಲೇವಾರಿ ಮಾಡಲಾಗುತ್ತಿದೆ. ರೈತರ ಕಡತಗಳನ್ನು ದಶಕಗಳ ಕಾಲ ಕಚೇರಿಯಲ್ಲಿ ಇಟ್ಟುಕೊಂಡು ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರು ಮೊದಲಿಗೆ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು. ತಿಂಗಳಿಗೆ ಒಮ್ಮೆ ಜನಸಂಪರ್ಕ ಸಭೆ ನಡೆಸುವುದರಿಂದ ಯಾವುದೇ ಪ್ರಯೋಜವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಅಧಿಕಾರಿಗಳ ಅಕ್ರಮಗಳನ್ನು ಬಯಲು ಮಾಡಲಾಗುವುದು ಎಂದು ಎಚ್ಚರಿಸಿದರು.
ಬೇಸಿಗೆ ಹಿನ್ನೆಲೆ ಕುಡಿಯುವ ನೀರು, ಪಶುಗಳಿಗೆ ಮೇವು ಹಾಗೂ ಇಂಧನ ಸಮಸ್ಯೆಗಳತ್ತ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ತಹಸಿಲ್ದಾರ್ ಗೀತಾ, ಉಪ ತಹಸಿಲ್ದಾರ್, ಶಿರಸ್ತೇದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ವೇಳೆ ಸಾರ್ವಜನಿಕರು ತಾಲೂಕು ಕಚೇರಿಯನ್ನು ತಲೆಹಿಡುಕರ ಕಚೇರಿ ಎಂದು ಟೀಕಿಸಿ ಅಸಮಾಧಾನ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ತಮ್ಮ ಜಮೀನು ಪೋಡಿ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ಈ ವೇಳೆ ತಹಸೀಲ್ದಾರ್ ಮೌನವಾಗಿದ್ದರು.
ಜಿಲ್ಲಾಧಿಕಾರಿಗಳು ಶಾಸಕರನ್ನು ಗೌರವಿಸುವ ಬದಲು ನಿರ್ಲಕ್ಷೃ ತೋರಿಸುತ್ತಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಅಧಿಕಾರಿಗಳನ್ನು ನೋಡಿಲ್ಲ. ರೈತರಿಗೆ ಕಾನೂನುಬದ್ಧವಾಗಿ ಸೇವೆ ನೀಡದಿದ್ದರೆ ತೀವ್ರ ಕ್ರಮ ಕೈಗೊಳ್ಳಲಾಗುವುದು ಎಂದು ರೇವಣ್ಣ ಗುಡುಗಿದರು.