ಅರಕಲಗೂಡಿನಲ್ಲಿ ಅಖಿಲ ಕರ್ನಾಟಕ ರಾಜ್ಯ ಪರವಾನಗಿ ಭೂ ಮಾಪಕರ ಸಂಘದ ವತಿಯಿಂದ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸುಂದರ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ವಿ. ಹೇಮಂತಕುಮಾರ್, ತುಳಸಿರಾಮ್, ಕುಮಾರ್, ಶಿವರಾಜ್, ಅನಂತ ಇತರರಿದ್ದರು.
ಅರಕಲಗೂಡು: ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಸರ್ಕಾರ ಭೂ ಮಾಪಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಪರವಾನಗಿ ಭೂ ಮಾಪಕರ ಸಂಘದ ನಿರ್ದೇಶಕ ವಿ.ಹೇಮಂತ ಕುಮಾರ್ ಆಗ್ರಹಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸುಂದರ್ ಅವರಿಗೆ ಮುಷ್ಕರ ನಿರತರೊಂದಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಭೂ ಮಾಪಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುಷ್ಕರ ನಿರತ ಭೂಮಾಪಕರಿಗೆ ಹುಸಿ ಭರವಸೆಗಳನ್ನು ನೀಡಲಾಗುತ್ತಿದೆ ಎಂದು ದೂರಿದರು.
ಸೇವಾ ಭದ್ರತೆ, ಜೀವ ವಿಮೆ ಹಾಗೂ ಬಾಂದು ಜವಾನರ ನೇಮಕ ಮಾಡುವಂತೆ ಮುಷ್ಕರ ಹೂಡಿದ್ದು ಈ ಸಂಬಂಧ ಪರವಾನಗಿ ಭೂ ಮಾಪಕರು ತಮ್ಮ ಲಾಗಿನ್‌ನಲ್ಲಿರುವ ಕಡತಗಳನ್ನು ರೈತರಿಗೆ ಸರ್ವೇ ಕೆಲಸಗಳಲ್ಲಿ ತೊಂದರೆಯಾಗದಂತೆ ವಾಪಸ್ ಪಡೆಯಲು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಪರಿವೀಕ್ಷಕ ಅನಂತ, ಸಂಘದ ತಾಲೂಕು ಘಟಕದ ಅಧ್ಯಕ್ಷ ತುಳಸಿರಾಮ್, ಉಪಾಧ್ಯಕ್ಷ ಕೆ.ಜೆ. ಕುಮಾರ್, ಖಜಾಂಚಿ ಬಿ.ಎಂ.ಶಿವರಾಜ್, ವಿಷಯ ನಿರ್ವಾಹಕಿ ಡಿ.ಎನ್.ಸುಮಾರಾಣಿ, ಸದಸ್ಯರಾದ ಎಸ್.ಟಿ. ಮೋಹನ್, ರವೀಂದ್ರ, ಬಿ.ಎಂ.ಆದರ್ಶ, ಎಚ್.ಅಭಿಜಿತ್, ಸಚಿನ್, ಗೌತಮ್, ಚೇತನ್, ಭರತ್, ವಿನೋದ್, ಹರೀಶ್, ಸಂತೋಷ್, ಮೋನಿಕಾ ಇದ್ದರು.