ಹಾಸನ ನಗರದ ರೈಲ್ವೆ ನಿಲ್ದಾಣ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆ ಎದುರಿನ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿ, ತಳ್ಳುವಗಾಡಿ ಹಾಗೂ ಬೀದಿ ಬದಿ ವ್ಯಾಪಾರ ಮಳಿಗೆಗಳನ್ನು ಮಹಾನಗರ ಪಾಲಿಕೆಯಿಂದ ತೆರವು ಮಾಡಲಾಯಿತು.
- ಅನಧಿಕೃತ ಗೂಡಂಗಡಿ, ತಳ್ಳುವಗಾಡಿಗಳ ತೆರವು
- ಮಹಾನಗರ ಪಾಲಿಕೆಯಿಂದ ಕಾರ್ಯಾಚರಣೆ
- ಅಧಿಕಾರಿಗಳ ವಿರುದ್ಧ ವ್ಯಾಪಾರಿಗಳ ಆಕ್ರೋಶ
ಹಾಸನ: ನಗರದ ರೈಲ್ವೆ ನಿಲ್ದಾಣ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆ ಎದುರಿನ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಗೂಡಂಗಡಿ, ತಳ್ಳುವಗಾಡಿ ಹಾಗೂ ಬೀದಿಬದಿ ವ್ಯಾಪಾರ ಮಳಿಗೆಗಳನ್ನು ಮಹಾನಗರ ಪಾಲಿಕೆಯಿಂದ ತೆರವು ಮಾಡಲಾಯಿತು.
ಹಾಸನ ಮಹಾನಗರ ಪಾಲಿಕೆ ಗುರುವಾರ ಬೆಳಗ್ಗೆ ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಸಿತು. ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಕೆಲ ವ್ಯಾಪಾರಿಗಳು ಹಾಗೂ ಆಟೋ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಬೆಳಗ್ಗೆಯೇ ಆರಂಭವಾದ ಕಾರ್ಯಾಚರಣೆಯಲ್ಲಿ ರೈಲ್ವೆ ನಿಲ್ದಾಣ ರಸ್ತೆ ಮತ್ತು ಜಿಲ್ಲಾಸ್ಪತ್ರೆ ಎದುರಿನ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದ ತಾತ್ಕಾಲಿಕ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು. ಜೆಸಿಬಿ ಮೂಲಕ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಂತೆ ಕೆಲ ವ್ಯಾಪಾರಿಗಳು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಜೀವನೋಪಾಯ ಕಸಿದುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವ್ಯಾಪಾರಿಗಳು ಮಾತನಾಡಿ, ನಗರದ ಅನೇಕ ಕಡೆಗಳಲ್ಲಿ ಇದೇ ರೀತಿ ಬೀದಿಬದಿ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಆಯ್ದ ಕೆಲವರ ಅಂಗಡಿಗಳನ್ನು ಮಾತ್ರ ತೆರವುಗೊಳಿಸುವುದು ನ್ಯಾಯ ಸಮ್ಮತವಲ್ಲ. ಪಾಲಿಕೆಗೆ ಪ್ರತಿದಿನ ಶುಲ್ಕ ಪಾವತಿಸುತ್ತಿದ್ದರೂ ಯಾವುದೇ ಲಿಖಿತ ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡ ಕುಟುಂಬಗಳ ಜೀವನೋಪಾಯಕ್ಕೆ ಈ ಅಂಗಡಿಗಳೇ ಆಧಾರವಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವುಗೊಳಿಸಿರುವುದು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದರು.
ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ರೈಲ್ವೆ ರಸ್ತೆ ಹಾಗೂ ಜಿಲ್ಲಾಸ್ಪತ್ರೆ ಎದುರಿನ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸುವ ಉದ್ದೇಶದಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಗೂಡಂಗಡಿ ನಿರ್ಮಿಸಿ ವ್ಯಾಪಾರ ನಡೆಸುವುದು ನಿಯಮಬಾಹಿರ. ಬೆಳಗ್ಗೆ 6 ಗಂಟೆಗೇ ಸ್ಥಳ ಖಾಲಿ ಮಾಡುವಂತೆ ಎಚ್ಚರಿಕೆ ನೀಡಲಾಗಿತ್ತು. ಯಾರೂ ಸ್ಪಂದಿಸದ ಕಾರಣ, 10 ಗಂಟೆ ನಂತರ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಜಿಲ್ಲಾಸ್ಪತ್ರೆ ಎದುರು ಆಹಾರ ಪದಾರ್ಥ ಮಾರಾಟ ಮಾಡುವಾಗ ಸ್ವಚ್ಛತಾ ನಿಯಮ ಪಾಲಿಸದಿರುವ ಬಗ್ಗೆ ನಿರಂತರ ದೂರು ಕೇಳಿ ಬಂದಿದ್ದವು. ಪಾದಚಾರಿ ಮಾರ್ಗಗಳಲ್ಲಿ ಕಸ, ಬಳಸಿದ ಕಾಫಿಲೋಟ, ಬಾಟಲಿಗಳು ಹಾಗೂ ಇತರ ತ್ಯಾಜ್ಯಗಳು ಬಿದ್ದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಆಸ್ಪತ್ರೆ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವುದು ಅಗತ್ಯ ಎಂದು ಹೇಳಿದರು.
ನಗರದಾದ್ಯಂತ ಹಂತಹಂತವಾಗಿ ಇದೇ ರೀತಿಯ ಅನಧಿಕೃತ ಅತಿಕ್ರಮಣ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಬಿ.ಎಂ. ರಸ್ತೆಯಲ್ಲೂ ಇತ್ತೀಚೆಗೆ ಹಣ್ಣಿನ ಅಂಗಡಿ ತೆರವುಗೊಳಿಸಲಾಗಿತ್ತು. ಸಾರ್ವಜನಿಕ ದೂರು ಬಂದ ಕಡೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಸುರಕ್ಷತೆ, ಪಾದಚಾರಿಗಳ ಅನುಕೂಲ ಹಾಗೂ ನಗರ ಸ್ವಚ್ಛತೆ ಕಾಪಾಡುವುದು ಪಾಲಿಕೆಯ ಪ್ರಮುಖ ಹೊಣೆಗಾರಿಕೆಯಾಗಿದೆ. ಆದ್ದರಿಂದ ತಳ್ಳುವಗಾಡಿ ಹಾಗೂ ಗೂಡಂಗಡಿಗಳನ್ನು ಎಲ್ಲೆಂದರಲ್ಲಿ ಸ್ಥಾಪಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.
ಪಾಲಿಕೆ ಆರೋಗ್ಯಾಧಿಕಾರಿಗಳು, ಕಂದಾಯ ವಿಭಾಗದ ಸಿಬ್ಬಂದಿ, ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಾಚರಣೆ ವೇಳೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.