ಅರಸೀಕೆರೆ ಗ್ರಾಮಾಂತರ: ತಾಲೂಕಿನ ಸುಪ್ರಸಿದ್ಧ ಕ್ಷೇತ್ರವಾದ ಮಾಲೆಕಲ್ ತಿರುಪತಿಯ ಶ್ರೀಲಕ್ಷ್ಮಿ ವೆಂಕಟರಮಣ ಸ್ವಾಮಿಯವರ ಭವ್ಯ ಬ್ರಹ್ಮರಥೋತ್ಸವವು ಭಾನುವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು. 
ಹಾಸನ

ಮಾಲೆಕಲ್ ತಿರುಪತಿಯಲ್ಲಿ ವೆಂಕಟರಮಣನ ಸ್ಮರಣೆ

ಪ್ರಮುಖ ಮುಖ್ಯಾಂಶಗಳು

  • Venkataramana at Malekal Tirupati
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಸುಪ್ರಸಿದ್ಧ ಕ್ಷೇತ್ರವಾದ ಮಾಲೆಕಲ್ ತಿರುಪತಿಯ ಶ್ರೀಲಕ್ಷ್ಮಿ ವೆಂಕಟರಮಣ ಸ್ವಾಮಿಯವರ ಭವ್ಯ ಬ್ರಹ್ಮರಥೋತ್ಸವವು ಭಾನುವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಧಾರ್ಮಿಕ ವಿಧಿವಿಧಾನಗಳ ಬಳಿಕ ಶ್ರೀಲಕ್ಷ್ಮಿ ವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಅಲಂಕೃತ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ, ಭಕ್ತರ ಜಯಘೋಷಗಳ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗೋವಿಂದಾ... ಗೋವಿಂದಾ... ಎಂಬ ನಾಮಸ್ಮರಣೆಯೊಂದಿಗೆ ಸಾವಿರಾರು ಭಕ್ತರು ರಥ ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ರಥೋತ್ಸವದ ಹಿನ್ನೆಲೆಯಲ್ಲಿ ಮಾಲೆಕಲ್ ತಿರುಪತಿ ಕ್ಷೇತ್ರವು ವಿದ್ಯುತ್ ದೀಪಾಲಂಕಾರ, ಬಣ್ಣಬಣ್ಣದ ತೋರಣಗಳು ಹಾಗೂ ಭವ್ಯ ಅಲಂಕಾರಗಳಿಂದ ಕಂಗೊಳಿಸಿತು. ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು, ಪ್ರಸಾದ ವಿತರಣೆ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.
ನವ ದಂಪತಿಯಿಂದ ದವನ ಅರ್ಪಣೆ
ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟ ನೂತನ ವಧು-ವರರು ರಥಕ್ಕೆ ದವನ ಎಸೆಯುವ ಸಂಪ್ರದಾಯ ಹಿಂದಿನಿಂದಲೂ ಜಾಲ್ತಿಯಲ್ಲಿದ್ದು, ನೂರಾರು ಜೋಡಿಗಳು ದವನ ಎಸೆದು ಭಕ್ತಿ ಸಮರ್ಪಿಸಿದರು. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಗೃಹಮಂಡಳಿ ಅಧ್ಯಕ್ಷ, ಶಾಸಕ ಶಿವಲಿಂಗೇಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ, ನಗರ ಪ್ರಾಧಿಕಾರ ಅಧ್ಯಕ್ಷ ಅರುಣ್ ಕುಮಾರ್, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಆರ್. ನಾಗರಾಜ್, ಕರವೇ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ಹೇಮಂತ್ ಕುಮಾರ್, ತುಳಸಿದಾಸ್, ಗ್ರಾಮಸ್ಥರು ಭಾಗಿಯಾಗಿದ್ದರು.
ಗರುಡೋತ್ಸವ ಸಹಿತ ಹಲವು ಉತ್ಸವ
ಶನಿವಾರ ಬೆಳಗ್ಗೆ ಏಕಾದಶಿ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಗುರುಡೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಕಳೆದ ವಾರದಿಂದಲೂ ಶ್ರೀವೆಂಕಟರಮಣ ಸ್ವಾಮಿಯ ಜಾತ್ರಾ ವೈಭವವು ಸುಕ್ಷೇತ್ರ ಮಾಲೇಕಲ್ಲು ತಿರುಪತಿಯಲ್ಲಿ ಕಳೆಗಟ್ಟಿತ್ತು. ಹಂಸವಾಹನ ಗಜಾನನ ಮೋಕ್ಷ, ಹನುಮೋತ್ಸವ, ತೆಪ್ಪೋತ್ಸವ ಹೀಗೆ ಹಲವಾರು ಕಾರ್ಯಕ್ರಮಗಳು ಸಂಭ್ರಮ ಸಡಗರದಿಂದ ಸಂಪನ್ನವಾಗಿವೆ.