ಹೊಳೆನರಸೀಪುರ ತಾಲೂಕಿನ ಕುರುಬ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹೊಳೆನರಸೀಪುರ: ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ತಾಲೂಕು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪುಟ್ಟರಾಜು ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ತಾಲೂಕು ಕುರುಬರ ಸಂಘ ಹಾಗೂ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ತಾಲೂಕಿನ ಕುರುಬ ಸಮುದಾಯದ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಕುರುಬ ಸಮುದಾಯದ 176 ಮಕ್ಕಳ ಪ್ರತಿಭೆಗೆ ಪುರಸ್ಕಾರ ಮಾಡಿ ಗೌರವಿಸಲಾಗುತ್ತಿದೆ. ಈ ಹಿಂದೆ ಶೈಕ್ಷಣಿಕವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಿಂದೆ ಉಳಿದಿದ್ದರು. ಆದರೆ ಇಂದು ಉತ್ತಮ ಸೌಲಭ್ಯಗಳಿಂದ ಶೈಕ್ಷಣಿಕವಾಗಿ ಬದಲಾವಣೆಯಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಗಳಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಉತ್ತಮ ಪ್ರತಿಭೆಗಳಾಗಿ ಹೊರಹೊಮ್ಮಿದಾರೆ. ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಂಘದ ವತಿಯಿಂದ ಆರ್ಥಿಕ ನೆರವನ್ನು ಒದಗಿಸುವ ಕೆಲಸವನ್ನು ನಿರ್ವಹಿಸಲಾಗುವುದು. ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಾಸ ಮಾಡುವ ಮೂಲಕ ಉನ್ನತ ವ್ಯಾಸಂಗ ಹಾಗೂ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಕುರುಬ ಸಂಘದ ಉಪಾಧ್ಯಕ್ಷ ಬಿ.ಪಿ.ಮಂಜೇಗೌಡ ಮಾತನಾಡಿ, ವಿದ್ಯಾಭ್ಯಾಸದ ಹಂತದಲ್ಲಿ ಶಿಸ್ತು, ಸಂಯಮ, ಸ್ಥಿರತೆ ಹಾಗೂ ಪರಿಶ್ರಮ ಅತ್ಯಗತ್ಯ. ಶಿಕ್ಷಣದಿಂದಲೇ ಎಲ್ಲ್ಲ ಪ್ರಗತಿಯೂ ಸಾಧ್ಯ. ಶೋಷಿತ ವರ್ಗದವರು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅತಿ ಮುಖ್ಯವಾಗಿದೆ ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಸ್.ಪುಟ್ಟಸ್ವಾಮಿ, ಎಂ.ಸಿ.ಮೋಹನ್ ಕುಮಾರ್ ಮಾತನಾಡಿದರು. ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಪರಮೇಶ್ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 176 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪುಟ್ಟೇಗೌಡ, ರಾಜೇಗೌಡ, ಕುಮಾರ್, ಅಣ್ಣೇಗೌಡ, ಸ್ವಾಮಿಗೌಡ, ಮಲ್ಲರಾಜೇಗೌಡ, ನಂಜುಂಡ, ಶ್ರೀಧರ್, ಚಂದ್ರಶೇಖರ, ಕೃಷೇಗೌಡ, ಶಿಕ್ಷಕ ಉಮೇಶ್, ಸಂಘದ ಕಾರ್ಯದರ್ಶಿ ದಾಶರಥಿ ಇದ್ದರು.