ರಾಜ್ಯ ಸರ್ಕಾರವು ಶಾಲೆ-ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ, ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು. ವೆಂಕಟೇಶ್ ರಾಜು, ಸುರೇಶ್‌ಗೌಡ ಇತರರಿದ್ದರು. 
ಹಾಸನ

ಕೇಸರಿ ಶಾಲು ನಿರ್ಬಂಧ ನಿರ್ಧಾರ ಮರುಪರಿಶೀಲಿಸಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಕೇಸರಿ ಶಾಲು ನಿರ್ಬಂಧ ನಿರ್ಧಾರ ಮರುಪರಿಶೀಲಿಸಿ
  • ಹಾಸನ
ಹಾಸನ: ರಾಜ್ಯ ಸರ್ಕಾರವು ಶಾಲೆ-ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ, ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮಂಗಳವಾರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಜತೆಗೆ ಮೇ 28ರ ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಅಕ್ರಮ ಗೋಸಾಗಣೆ ಹಾಗೂ ಕಾನೂನುಬಾಹಿರ ಗೋಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು.
ಸಮಿತಿಯ ವೆಂಕಟೇಶ್ ರಾಜು ಮಾತನಾಡಿ, ಶಿಕ್ಷಣ ಸಂಸ್ಥೆಗಳು ಜ್ಞಾನ, ಶಿಸ್ತು ಹಾಗೂ ರಾಷ್ಟ್ರೀಯ ಏಕತೆಯ ಕೇಂದ್ರವಾಗಿರಬೇಕು. ಧಾರ್ಮಿಕ ಗುರುತುಗಳಿಗೆ ಪ್ರತ್ಯೇಕ ಅವಕಾಶ ನೀಡಿದರೆ ವಿದ್ಯಾರ್ಥಿಗಳಲ್ಲಿ ಧರ್ಮ ಆಧಾರಿತ ವಿಭಜನೆ ಹೆಚ್ಚುತ್ತದೆ. 2022ರ ಉಡುಪಿ ಹಿಜಾಬ್ ವಿವಾದದ ವೇಳೆ ಹೈಕೋರ್ಟ್, ಹಿಜಾಬ್ ಮುಸ್ಲಿಂ ಧರ್ಮದ ಕಡ್ಡಾಯ ಆಚರಣೆ ಅಲ್ಲ ಎಂದು ಸ್ಪಷ್ಟಪಡಿಸಿತ್ತು. ಈಗ ಸರ್ಕಾರದ ನಿರ್ಧಾರ ಮತ್ತೆ ವಿವಾದಕ್ಕೆ ಕಾರಣವಾಗಬಹುದು. ಒಂದು ಸಮುದಾಯಕ್ಕೆ ಅವಕಾಶ, ಇನ್ನೊಂದಕ್ಕೆ ನಿರ್ಬಂಧ ಸಮಾನತೆಗೆ ವಿರುದ್ಧ. ಆದ್ದರಿಂದ ಎಲ್ಲರಿಗೂ ಏಕರೂಪ ಸಮವಸ್ತ್ರ ನಿಯಮ ಜಾರಿಗೊಳಿಸಬೇಕು ಎಂದರು.
ರಾಷ್ಟ್ರ ರಕ್ಷಣ ಸೇನೆಯ ಸುರೇಶ್‌ಗೌಡ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಬಕ್ರಿದ್ ಸಂದರ್ಭದಲ್ಲಿ ಅಕ್ರಮ ಹತ್ಯೆ ನಡೆಯುವ ಆತಂಕವಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ 24 ಗಂಟೆ ಚೆಕ್‌ಪೋಸ್ಟ್ ಸ್ಥಾಪಿಸಿ ಪಶು ಸಾಗಾಟ ದಾಖಲೆ ಪರಿಶೀಲಿಸಬೇಕು. ಜನವಸತಿ ಪ್ರದೇಶ, ತಾತ್ಕಾಲಿಕ ಶೆಡ್‌ಗಳಲ್ಲಿ ಹತ್ಯೆಗೆ ಅವಕಾಶ ನೀಡಬಾರದು. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಾಂತಿ ಕಾಪಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುಜಾತಾ, ಧರ್ಮನಾಯಕ್, ಸಂಪತ್ ಕುಮಾರ್, ಪವನ್ ಕುಮಾರ್, ನೇಹಾವತಿ ಇತರರಿದ್ದರು.