ಗಂಡಸಿ ಹೋಬಳಿಯ ಕೆಂಕೆರೆಯಲ್ಲಿ ಸಿದ್ದರಾಮಯ್ಯ ಅವರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಮೆಟ್ರೋ ಬಾಬು, ಬಿಳಿ ಚೌಡಯ್ಯ ಮಂಜರಾಜ್, ಮಲ್ಲೇಶ್, ಈಶ್ವರಪ್ಪ, ರಾಮಚಂದ್ರು, ರೂಪೇಶ್ ಇತರರು ಇದ್ದರು.
- ಶಾಸಕ ಎಚ್.ಡಿ.ರೇವಣ್ಣಗೆ ಕೆ.ಎಂ.ಶಿವಲಿಂಗೇಗೌಡ ಸವಾಲು
ಗಂಡಸಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲು ಘಟಾನುಘಟಿ ನಾಯಕರು ಇಂಗಿತ ವ್ಯಕ್ತಪಡಿಸಿದ್ದಾರೆ. ಚುನಾವಣಾ ಅಖಾಡಕ್ಕೆ ಧುಮುಕಲು ನಾನು ಸಿದ್ಧ, ತಾಕತ್ತಿದ್ದರೆ ನೀವು ಸ್ಪರ್ಧಿಸಿ ಎಂದು ಶಾಸಕ ಎಚ್.ಡಿ.ರೇವಣ್ಣ ಅವರ ಹೆಸರು ಹೇಳದೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸವಾಲು ಹಾಕಿದರು.
ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಭಾನುವಾರ ರಾತ್ರಿ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸಿದ್ದರಾಮಯ್ಯ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅರಸೀಕೆರೆ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ನಾನು ಮತದಾರರ ನಾಡಿಮಿಡಿತ ಅರಿತ್ತಿದ್ದೇನೆ. ಸುಳ್ಳು ಭರವಸೆ ನೀಡುವವರನ್ನು ಜನರು ತಿರಸ್ಕರಿಸಿ ನನ್ನ ಕೈ ಹಿಡಿಯಲಿದ್ದಾರೆ. ಮತದಾರರು ಅಭಿವೃದ್ಧಿಗೆ ಮತ ಹಾಕುತ್ತಾರೋ ಅಥವಾ ಸುಳ್ಳು ಭರವಸೆ ನೀಡುವವರಿಗೆ ಮತ ಹಾಕುತ್ತಾರೋ ನೋಡೋಣ ಎಂದರು.
ಸಿದ್ದರಾಮಯ್ಯ ಅವರ ಅಭಿನಂದನಾ ಸಮಾರಂಭ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಅಭಿನಂದನಾ ಸಮಾರಂಭ ನಡೆಯುತ್ತಿದೆ. ಶೋಷಿತ ವರ್ಗಗಳ ಅಭಿವೃದ್ಧಿಯ ಹರಿಕಾರ, ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ರಾಜ್ಯದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗಲಿದೆ ಎಂದು ಸಿದ್ದರಾಮಯ್ಯ ಅವರನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಜಿ.ಪಂ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಎಪಿಎಂಸಿ ಮಾಜಿ ಸದಸ್ಯ ಮಲ್ಲಾಪುರ ಮಂಜುರಾಜ್, ಎಚ್.ಕೆ.ಹಳ್ಳಿ ರಾಮಚಂದ್ರು, ಯರಗನಾಳು ಮಲ್ಲೇಶ್, ಚಗಚಗೆರೆ ಈಶ್ವರಪ್ಪ, ವಕೀಲ ಕುಮಾರ್, ಕೆಂಕೆರೆ ಗ್ರಾ.ಪಂ.ಅಧ್ಯಕ್ಷರು ಮತ್ತು ಸದಸ್ಯರು, ಕುರುಬ ಸಮಾಜದ ಮುಖಂಡರು ಇದ್ದರು.