ಹಾಸನದ ವಿದ್ಯಾನಗರ ಬಡಾವಣೆಯ ಚಿತ್ರಕಲಾ ನಿವೃತ್ತ ಶಿಕ್ಷಕ ಬಿ.ಎಸ್.ದೇಸಾಯಿ ಅವರ ನಿವಾಸದ ಕಲಾ ಗ್ಯಾಲರಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಡಾ.ಮಾನಸ, ಆರ್.ಸಿ.ಕಾರದಕಟ್ಟಿ, ಗೊರೂರು ಅನಂತರಾಜು ಇತರರಿದ್ದರು. 
ಹಾಸನ

ಉತ್ತಮ ಪುಸ್ತಕ ಓದಿನಿಂದ ಮನದ ಕಲ್ಮಶ ನಾಶ

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಪುಸ್ತಕ ಓದಿನಿಂದ ಮನದ ಕಲ್ಮಶ ನಾಶ
  • ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಪ್ರಾಯ
  • ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟನೆ

ಹಾಸನ:

ಮನುಷ್ಯನಿಗೆ ದೇಹದ ಕೊಳೆ ತೆಗೆಯಲು ಸ್ನಾನ ಎಷ್ಟು ಮುಖ್ಯವೋ ಮನಸ್ಸಿನ ಕಲ್ಮಶಗಳನ್ನು ತೆಗೆಯಲು ಉತ್ತಮ ಪುಸ್ತಕಗಳ ಓದೂ ಮುಖ್ಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಪ್ರಾಯಪಟ್ಟರು.

ಹಾಸನದ ವಿದ್ಯಾನಗರ ಬಡಾವಣೆಯ ಚಿತ್ರಕಲಾ ನಿವೃತ್ತ ಶಿಕ್ಷಕ ಬಿ.ಎಸ್.ದೇಸಾಯಿ ಅವರ ನಿವಾಸದ ಕಲಾ ಗ್ಯಾಲರಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಪುಸ್ತಕಗಳನ್ನು ಒಳಗೊಂಡ ಒಂದು ವಾಚನಾಲಯ ಪ್ರತಿಯೊಂದು ಮನೆಯಲ್ಲಿ ಇರುವುದು ಮುಖ್ಯ. ದಿನನಿತ್ಯದ ಒತ್ತಡ ಮುಗಿಸಿಕೊಂಡು ನಿದ್ರೆಗೆ ಜಾರುವ ಮೊದಲು ಸ್ವಲ್ಪ ಹೊತ್ತು ಓದುವುದರಿಂದ ನಿದ್ದೆ ತಾನಾಗಿಯೇ ಆವರಿಸಿಕೊಳ್ಳುತ್ತದೆ. ಪುಸ್ತಕ ಓದುವಿಕೆ ಧ್ಯಾನಕ್ಕೆ ಸಮಾನವಾದದ್ದು. ದಿನದಿಂದ ದಿನಕ್ಕೆ ನಮ್ಮ ಮನಸ್ಸು ಸಹಜವಾಗಿ ಒಳ್ಳೆಯ ಮತ್ತು ಕೆಟ್ಟ ಯೋಚನೆಗಳಿಂದ ಮಲಿನವಾಗಿರುತ್ತದೆ, ಅದನ್ನು ತೊಳೆಯಬೇಕು. ಕಾರಣ ಉತ್ತಮ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ವಾಚನಾಲಯ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದ್ದು, ರಾಜ್ಯದಲ್ಲಿ ಒಂದು ಲಕ್ಷ ಕಾರ್ಯಕ್ರಮದ ಗುರಿ ಸಾಧಿಸುವ ಆಶಯ ಇದೆ ಎಂದು ಹೇಳಿದರು.
ನಿರ್ಮಲಾ ಚಿತ್ರಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಆರ್.ಸಿ.ಕಾರದಕಟ್ಟಿ ಮಾತನಾಡಿ, ಹಾಸನಕ್ಕೆ ಬಿ.ಎಸ್. ದೇಸಾಯಿ ಅವರು ಚಿತ್ರಕಲಾ ಶಿಕ್ಷಕರಾಗಿ ಬಂದ ನಂತರ ತ್ರಿವೇಣಿ ಸಂಗಮದಂತೆ, ಕಲಾ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ಚಿತ್ರಕಲಾ ಪ್ರದರ್ಶನಗಳು ಕಲಾ ಚಟುವಟಿಕೆ ಚಾಲನೆಗೊಂಡು ರಾಜ್ಯದ ಹಿರಿಯ ಚಿತ್ರಕಲಾವಿದರ, ಯುವ ಕಲಾವಿದರ ಆಗಮನ ಹೆಚ್ಚಾಗಿ ಕಲೆಯ ಬಗ್ಗೆ ಜ್ಞಾನ ವಿಸ್ತರಿಸುತ್ತಾ ಬಂತು. ರಾಜ್ಯ ಚಿತ್ರಕಲಾ ಶಿಕ್ಷಕರ ಸಮ್ಮೇಳನ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಚಿತ್ರಕಲಾ ಶಿಬಿರ ವಾರ್ಷಿಕ ಕಲಾ ಪ್ರದರ್ಶನ ಮತ್ತು ಅದರ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹು ಯಶಸ್ವಿಯಾಗಿ ನಿರ್ವಹಿಸಿದ ಯಶಸ್ಸು ದೇಸಾಯಿ ಅವರದು ಎಂದು ಶ್ಲಾಘಿಸಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಕಥೆ, ಕವಿತೆ, ಸಾಹಿತ್ಯ ಮತ್ತು ಚಿತ್ರಕಲೆ ಒಂದಕ್ಕೊಂದು ಪರಸ್ಪರ ಪೂರಕವಾಗಿವೆ. ಒಂದು ಕಥೆ ಕಾದಂಬರಿ, ಕವಿತೆಗಳ ಸಾರವನ್ನು ಒಂದು ಚಿತ್ರಕಲೆ ಅಭಿವ್ಯಕ್ತಿಸುತ್ತದೆ. ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವು ಕನ್ನಡ ಪುಸ್ತಕ ಪ್ರಾಧಿಕಾರದ ಒಂದು ಉತ್ತಮ ಕಾರ್ಯವಾಗಿದೆ. ಓದುವ ಅಭಿರುಚಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ. ಪುಸ್ತಕ ಕೊಂಡು ಓದಿ ಸಂಗ್ರಹಿಸಿ ಅವುಗಳನ್ನು ಇತರರಿಗೂ ಓದಲು ಎರವಲು ಕೊಡುವುದು ಉತ್ತಮ ಆಶಯವಾಗಿದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರ ಹಾಗೂ ಪ್ರಾಧ್ಯಾಪಕ ಡಾ. ಕುಶಲ್ ಬರಗೂರು ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಆಶಯ ಹೊಂದಿದ್ದು, ಕವಿಗಳು, ಸಾಹಿತಿಗಳು, ಲೇಖಕರು ತಮ್ಮ ಮನೆಗಳಲ್ಲಿ ಸಂಗ್ರಹಿಸಿರುವ ಪುಸ್ತಕಗಳ ಮಾಹಿತಿ ನೀಡಿದರೆ ಅವರ ಮನೆಯಲ್ಲಿ ಅವರನ್ನು ಗೌರವಿಸಿ ಅವರ ಕೃತಿ ಕುರಿತಂತೆ ಉಪನ್ಯಾಸ ಏರ್ಪಡಿಸುವ ಆಶಯವಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾ ಮಾಜಿ ಅಧ್ಯಕ್ಷ ಉದಯರವಿ, ಕದಂಬ ಸೈನ್ಯ ಕನ್ನಡ ಸಂಘಟನೆ ಹಾಸನ ಜಿಲ್ಲಾಧ್ಯಕ್ಷ ಗಣೇಶ್ ಅಂಕಪುರ ಭಾಗವಹಿಸಿದ್ದರು.
ಬಿ. ಎಸ್.ದೇಸಾಯಿ ದಂಪತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸನ್ಮಾನಿಸಿ ಅಭಿನಂದನೆ ಪತ್ರ ನೀಡಲಾಯಿತು.